ತನ್ನನ್ನು ನಿಷ್ಪ್ರಯೋಜಕ ಎಂದು ಅವಮಾನಿಸಿದ್ದ ಗೆಹ್ಲೋಟ್ ಬಗ್ಗೆ ಸಚಿನ್ ಪೈಲಟ್ ಪ್ರತಿಕ್ರಿಯೆ ಏನು ಗೊತ್ತಾ?

Update: 2020-08-11 16:24 GMT

 ಜೈಪುರ,ಆ.11: ತನ್ನನ್ನು ನಿಕಮ್ಮಾ ‘(ನಿಷ್ಪ್ರಯೋಜಕ)’ ಎಂದು ಬಣ್ಣಿಸಿದ್ದ ಮತ್ತು ಸರಕಾರವನ್ನು ಉರುಳಿಸಲು ಬಿಜೆಪಿ ಜೊತೆ ತಾನು ಶಾಮೀಲಾಗಿದ್ದೇನೆ ಎಂದು ಆರೋಪಿಸಿದ್ದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ವಿರುದ್ಧ ತನ್ನಲ್ಲಿ ಯಾವುದೇ ಕೆಟ್ಟ ಭಾವನೆಗಳಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮಂಗಳವಾರ ಇಲ್ಲಿ ಹೇಳಿದರು.

ಸೋಮವಾರ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿಯಾದ ಬಳಿಕ ಪೈಲಟ್ ತನ್ನ ಒಂದು ತಿಂಗಳ ಬಂಡಾಯಕ್ಕೆ ಅಂತ್ಯ ಹಾಡಿದ್ದಾರೆ.

ತಾನು ತನ್ನ ಕುಟುಂಬದ ಕೆಲವು ಗುಣಗಳನ್ನು ಮೈಗೂಡಿಸಿಕೊಂಡಿದ್ದೇನೆ. ತಾನು ಯಾರನ್ನೂ ಎಷ್ಟೇ ವಿರೋಧಿಸಲಿ,ಇಂತಹ ಭಾಷೆಯನ್ನೆಂದೂ ಬಳಸಿಲ್ಲ ಎಂದು ಪೈಲಟ್ ‘ನಿಕಮ್ಮಾ’ ಟೀಕೆಯ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

“ಗೆಹ್ಲೋಟ್ ಅವರು ನನಗಿಂತ ಹಿರಿಯರು ಮತ್ತು ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಗೌರವವಿದೆ,ಆದರೆ ಕೆಲಸಕ್ಕೆ ಸಂಬಂಧಿಸಿದ ಕಳವಳಗಳನ್ನೆತ್ತಲು ನನಗೆ ಹಕ್ಕು ಇದೆ. ಸಾರ್ವಜನಿಕ ಜೀವನದಲ್ಲಿ ಲಕ್ಷಣ ರೇಖೆಯಿರಬೇಕು ಮತ್ತು ಕಳೆದ 20 ವರ್ಷಗಳಲ್ಲಿ ನಾನೆಂದಿಗೂ ಅದನ್ನು ದಾಟಿಲ್ಲ. ಪರಸ್ಪರರ ವಿರುದ್ಧ ವೈಯಕ್ತಿಕ ದಾಳಿಗಳು ಮತ್ತು ಕಠೋರ ಶಬ್ದಗಳ ಬಳಕೆ ಸರಿಯಲ್ಲ ಮತ್ತು ಅಗತ್ಯವೂ ಅಲ್ಲ ಎಂಬ ನಿದರ್ಶನವೊಂದನ್ನು ನಾವು ಜನತೆಯ ಮುಂದೆ ಇಡಬೇಕಾದ ಅಗತ್ಯವಿದೆ. ನಾನೆಂದೂ ಅದನ್ನು ಮಾಡುವುದಿಲ್ಲ, ಅದಕ್ಕೆ ನಾನು ಪ್ರತಿಕ್ರಿಯಿಸಬೇಕು ಎಂದೂ ನಾನು ಭಾವಿಸಿಲ್ಲ” ಎಂದರು.

ತನ್ನ ಮತ್ತು ಗೆಹ್ಲೋಟ್ ನಡುವಿನ ಸಂಬಂಧ ಸರಿಪಡಿಸಲಾಗದಷ್ಟು ಕೆಟ್ಟು ಹೋಗಿದೆ ಎನ್ನುವುದನ್ನು ಅವರು ಒಪ್ಪಿಕೊಳ್ಳಲಿಲ್ಲ. ತಾನು ಯಾವುದೇ ವೈಯಕ್ತಿಕ ದ್ವೇಷಗಳನ್ನು ಬೆಳೆಸಿಕೊಳ್ಳುವುದಿಲ್ಲ ಎಂದರು. ಗೆಹ್ಲೋಟ್‌ಗೆ ನಿಮ್ಮಿಂದ ಏನಾದರೂ ಸಂದೇಶವಿದೆಯೇ ಎಂಬ ಪ್ರಶ್ನೆಗೆ,ಅವರಿಗೆ ನೀಡಲು ಯಾವುದೇ ಸಂದೇಶ ತನ್ನ ಬಳಿಯಿಲ್ಲ ಎಂದು ಪೈಲಟ್ ಉತ್ತರಿಸಿದರು.

 ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು,ತಾನು ಮತ್ತು ಗೆಹ್ಲೋಟ್ ಜೊತೆಯಾಗಿ ಕೆಲಸ ಮಾಡಿದ್ದೇವೆ. ಸಿದ್ಧಾಂತಗಳು ಮತ್ತು ತತ್ತ್ವಗಳಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ,ಆದರೆ ರಾಜಕೀಯದಲ್ಲಿ ವೈಯಕ್ತಿಕ ಭಿನಾಭಿಪ್ರಾಯಗಳಿಗೆ ಜಾಗವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News