‘ಅಮೆರಿಕಾ, ಪಾಕ್, ಚೀನಾ ಗಮನಿಸಬಹುದೆಂದು ರಕ್ಷಣಾ ಆಡಿಟ್ ವರದಿಗಳನ್ನು ಅಪ್‍ಲೋಡ್ ಮಾಡಿಲ್ಲ’

Update: 2020-08-11 09:29 GMT

ಹೊಸದಿಲ್ಲಿ: “ವಾಷಿಂಗ್ಟನ್‍ ನಲ್ಲಿ , ಬೀಜಿಂಗ್‍ ನಲ್ಲಿ  ಹಾಗೂ ಇಸ್ಲಾಮಾಬಾದ್‍ ನಲ್ಲಿ ಯಾರಾದರೂ ಗಮನಿಸುತ್ತಿರಬಹುದು'' ಎಂಬ ಕಾರಣಕ್ಕೆ ದೇಶದ ರಕ್ಷಣಾ ಆಡಿಟ್ ವರದಿಗಳನ್ನು ಆನ್ ಲೈನ್ ನಲ್ಲಿ ಲಭ್ಯವಾಗಿಸಿಲ್ಲ ಎಂದು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಹುದ್ದೆಯಿಂದ ನಿವೃತ್ತರಾದ  ರಾಜೀವ್ ಮೆಹ್ರಿಶಿ ಅವರು ವಿವರಣೆ ನೀಡಿದ್ದಾರೆ.

“ಈ ವರದಿಗಳು ಸುಲಭವಾಗಿ ಲಭ್ಯವಾಗದಂತೆ ನೋಡಿಕೊಳ್ಳುವುದೇ ಉದ್ದೇಶವಾಗಿತ್ತು. ಅದು ಅಗತ್ಯವೂ ಇಲ್ಲ, ಇದು ಸರಕಾರದ ನಿರ್ಧಾರವಲ್ಲ ಬದಲು ನನ್ನ ನಿರ್ಧಾರವಾಗಿತ್ತು'' ಎಂದೂ ಅವರು ಹೇಳಿದರು.

“ನಾವು ಈ ವರದಿಯನ್ನು ಸಂಸತ್ತಿಗೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡುತ್ತಿದ್ದೇವೆ. ನಿಜವಾಗಿಯೂ ಅದೊಂದು ರಹಸ್ಯವಿಲ್ಲ.  ಆದರೆ ಕೇವಲ ಒಂದು ಟ್ಯಾಪ್ ಮಾಡಿದರೆ ಲಭ್ಯವಾಗುವಂತೆ ನಾವು ಮಾಡಿಲ್ಲ'' ಎಂದು ಅವರು ಹೇಳಿದರು.

“ಲೋಪದೋಷಗಳನ್ನು ನಮ್ಮ ವರದಿಯಲ್ಲಿ ಉಲ್ಲೇಖಿಸುತ್ತೇವೆ. ಆದರೆ ರಕ್ಷಣಾ ವರದಿಗಳನ್ನು ವೆಬ್‍ ಸೈಟ್‍ ನಲ್ಲಿ ಅಪ್‍ ಲೋಡ್ ಮಾಡುವ ಅಗತ್ಯವಿಲ್ಲ. ಅದು ಜಗತ್ತಿನಲ್ಲಿ ಎಲ್ಲರಿಗೂ ಸುಲಭವಾಗಿ ಏಕೆ ಲಭ್ಯವಾಗಬೇಕು?'' ಎಂದು ಅವರು ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, “ನಾನು ಗೃಹ ಸಚಿವಾಲಯದಲ್ಲಿದ್ದಾಗ ಪಾಕಿಸ್ತಾನದ ಜತೆಗೆ ಭಾರೀ ಉದ್ವಿಗ್ನ ಸ್ಥಿತಿಯಿತ್ತು.  ಆಗ ಸಿಎಜಿ ವರದಿಯಲ್ಲಿ ಶಸ್ತ್ರಾಸ್ತ್ರ ಕೊರತೆ ಕುರಿತು ವಿವರಗಳಿದ್ದವು. ವಾಸ್ತವವಾಗಿ ಅಲ್ಲಿ ಕೊರತೆಯಿದ್ದರೂ  ಶತ್ರುಗಳು ಅದರ ಬಗ್ಗೆ ತಿಳಿಯಬಾರದು'' ಎಂದರು.

ಮಾಜಿ ಗೃಹ ಕಾರ್ಯದರ್ಶಿಯಾಗಿದ್ದ ಮೆಹ್ರಿಶಿ ಅವರನ್ನು ಸಿಎಜಿ ಆಗಿ ಸೆಪ್ಟೆಂಬರ್ 2017ರಲ್ಲಿ ನೇಮಕ ಮಾಡಿದ್ದರು. ಅವರ ಅವಧಿಯಲ್ಲಿ ಎಂಟು ರಕ್ಷಣಾ ಆಡಿಟ್ ವರದಿಗಳನ್ನು ಸಂಸತ್ತಿಗೆ ಸಲ್ಲಿಸಲಾಗಿತ್ತಾದರೂ ಅವುಗಳನ್ನು ಸಿಎಜಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News