ನ್ಯಾಯಮೂರ್ತಿ ಲೋಯಾ, ಗೋಪಿನಾಥ್ ಮುಂಢೆ ಸಾವು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಿ: ಶಿವಸೇನೆ ನಾಯಕನ ಆಗ್ರಹ

Update: 2020-08-11 12:43 GMT

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಕುರಿತಂತೆ ಬಿಹಾರದಲ್ಲಿ ದಾಖಲಿಸಲಾದ ಎಫ್‍ಐಆರ್ ಆಧಾರದಲ್ಲಿ ಕೇಂದ್ರ ಸರಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ನಂತರ ಎದ್ದಿರುವ ವಿವಾದಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಈ ನಿಟ್ಟಿನಲ್ಲಿ ಬಿಜೆಪಿಗೆ ತಿರುಗೇಟು ನೀಡಿರುವ ಶಿವಸೇನೆ ಸಂಸದ ಅರವಿಂದ್ ಸಾವಂತ್, ಕೇಂದ್ರ ಸರಕಾರ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಗೋಪಿನಾಥ್ ಮುಂಢೆ ಮತ್ತು ಸಿಬಿಐ ನ್ಯಾಯಾಧೀಶರಾಗಿದ್ದ ಬಿ. ಎಚ್. ಲೋಯಾ ಸಾವು ಪ್ರಕರಣಗಳನ್ನೂ ಸಿಬಿಐಗೆ ಹಸ್ತಾಂತರಿಸಬೇಕೆಂದು ಆಗ್ರಹಿಸಿದ್ದಾರೆ.

ಗೋಪಿನಾಥ್ ಮುಂಢೆ ಅವರು ಜೂನ್ 2014ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರೆ,  ಜಸ್ಟಿಸ್ ಲೋಯಾ ಅವರು ಡಿಸೆಂಬರ್ 1, 2014ರಲ್ಲಿ ಶಂಕಾಸ್ಪದವಾಗಿ ಸಾವಿಗೀಡಾಗಿದ್ದರು.

ಸುಶಾಂತ್ ಪ್ರಕರಣ ಕುರಿತಂತೆ ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರನ್ನು ಸಿಬಿಐ ವಿಚಾರಣೆಗೊಳಪಡಿಸಬೇಕು ಹಾಗೂ ಇಬ್ಬರನ್ನೂ ನಾರ್ಕೋ ಪರೀಕ್ಷೆಗೊಳಪಡಿಸಬೇಕು ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ್ ಬೇಡಿಕೆಯಿರಿಸಿದ ಕೆಲವೇ ಗಂಟೆಗಳ ನಂತರ ಸಾವಂತ್ ಅವರ ಆಗ್ರಹ ಕೇಳಿ ಬಂದಿದೆ.

ಪ್ರಕರಣಕ್ಕೆ ಬಿಜೆಪಿ ರಾಜಕೀಯ ಬಣ್ಣ ಹಚ್ಚುತ್ತಿದೆ ಎಂದು ಆರೋಪಿಸಿದ ಸಾವಂತ್, ಆದಿತ್ಯ ಠಾಕ್ರೆಗೂ ಸುಶಾಂತ್ ಸಾವು ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

“ಒಬ್ಬ ಯುವ ಸಚಿವರಿಗೆ ಈ ಪ್ರಕರಣದ ಜತೆ ನಂಟಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ” ಎಂದು ಮುಂಬೈ ಬಿಜೆಪಿ ಶಾಸಕ ಅತುಲ್ ಭಟ್ಕಳ್ಕರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News