ವಿದ್ಯಾರ್ಥಿಗಳೇ ಎದೆಗುಂದದಿರಿ

Update: 2020-08-11 17:36 GMT

ಮಾನ್ಯರೇ,
 
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಆದರೆ ಈ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಎದೆಗುಂದದೆ ಫಲಿತಾಂಶವನ್ನು ಸವಾಲಾಗಿ ಸ್ವೀಕರಿಸಿಕೊಂಡು ಮುಂಬರುವ ದಿನಗಳಲ್ಲಿ ಉತ್ತಮ ತಯಾರಿಯೊಂದಿಗೆ ಪರೀಕ್ಷೆಯನ್ನು ಸಕಲ ಸಿದ್ಧತೆಯೊಂದಿಗೆ ಎದುರಿಸುವ ಪಣತೊಡಬೇಕಾಗಿದೆ. ದುರದೃಷ್ಟವಶಾತ್ ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಬಹಳ ಗಂಭೀರವಾಗಿ ತೆಗೆದುಕೊಂಡು ಜೀವನದಲ್ಲಿ ಆತ್ಮಹತ್ಯೆಯಂತಹ ಹೇಯ ಕೃತ್ಯವನ್ನು ಎಸಗುತ್ತಿರುವ ವರದಿಗಳು ಇತ್ತೀಚೆಗೆ ಮಾಧ್ಯಮಗಳಿಂದ ಹೆಚ್ಚಾಗಿ ವರದಿಯಾಗುತ್ತಿವೆ.

ಇತಿಹಾಸದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಈ ಹಂತದಲ್ಲಿ ಅಷ್ಟೊಂದು ಸಫಲತೆಯನ್ನು ಕಾಣದೆ ಇದ್ದರೂ ಮುಂದೆ ತಮ್ಮ ಬದುಕಿನಲ್ಲಿ ಯಶಸ್ಸು ಕಂಡ ಉದಾಹರಣೆಗಳು ನಮ್ಮ ನಡುವೆ ಧಾರಾಳ ಇವೆ. ಪರೀಕ್ಷೆಗಳ ಫಲಿತಾಂಶದ ಆಚೆಗೂ ಬದುಕಿದೆ ಎಂಬ ವಾಸ್ತವಿಕತೆಯನ್ನು ನಾವೆಂದೂ ಮರೆಯಬಾರದು. ಜೀವನದ ಪ್ರತಿಯೊಂದು ಕ್ಷಣವನ್ನು ನಾವು ಗೌರವಿಸುವವರಾಗಬೇಕು, ನಮ್ಮನ್ನು ನಾವು ಯಾವ ಕಾರಣಕ್ಕೂ ಕೀಳಾಗಿ ಭಾವಿಸಕೂಡದು. ನಮ್ಮ ತಂದೆ-ತಾಯಿ, ನಮ್ಮನ್ನು ರೂಪಿಸಿದ ಶಿಕ್ಷಕರು ನಮ್ಮ ಕುರಿತು ಅನೇಕ ಕನಸುಗಳನ್ನು ಕಂಡಿರುತ್ತಾರೆ. ಅವರ ಆಸೆಗಳಿಗೆ ಚ್ಯುತಿ ಬರದ ಹಾಗೆ ನಾವು ನಡೆದುಕೊಳ್ಳಬೇಕು. ಜೀವನ ಎಂಬುದು ಬಹಳ ಅಮೂಲ್ಯವಾದಂತಹದ್ದು. ಅದನ್ನು ಯಾವ ಕಾರಣಕ್ಕೂ ನಾಶಪಡಿಸುವ ಅಧಿಕಾರ ನಮಗಿಲ್ಲ. ಆದ್ದರಿಂದ ವಿದ್ಯಾರ್ಥಿಗಳೇ ಪ್ರತಿಯೊಂದು ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿಕೊಂಡು ಮುಂದೆ ಸಾಗಿ. ಆಗ ಯಶಸ್ಸು ತಾನಾಗಿಯೇ ನಿಮ್ಮ ಕೈ ಹಿಡಿಯುತ್ತದೆ. 

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News