ಕೊರೋನ : ಆಗಸ್ಟ್‌ನಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಇಳಿಕೆ

Update: 2020-08-12 03:56 GMT

ಹೊಸದಿಲ್ಲಿ : ಐದು ತಿಂಗಳಿಂದ ದೇಶದ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದ ಕೋವಿಡ್-19 ಸಾಂಕ್ರಾಮಿಕ ಕಡಿಮೆಯಾಗುವ ಲಕ್ಷಣ ಮೊಟ್ಟಮೊದಲ ಬಾರಿ ಗೋಚರಿಸುತ್ತಿದೆ. ಆಗಸ್ಟ್ ತಿಂಗಳ ಮೊದಲ 10 ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕುಂಠಿತವಾಗಿರುವುದು ಶುಭಸೂಚನೆ ಎಂದು ರಾಜ್ಯ ಸರ್ಕಾರಗಳಿಂದ ಪಡೆದ ಅಂಕಿ ಅಂಶಗಳಿಂದ ದೃಢಪಟ್ಟಿದೆ.

ದೊಡ್ಡ ಪ್ರಮಾಣದಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದರೂ, ಹಿಂದಿನ ಹತ್ತು ದಿನಗಳಿಗೆ ಹೋಲಿಸಿದರೆ ಆಗಸ್ಟ್ ತಿಂಗಳ ಮೊದಲ 10 ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಏರಿಕೆ ಅರ್ಧದಷ್ಟು ಕಡಿಮೆಯಾಗಿದೆ. ಹೊಸ ಪ್ರಕರಣಗಳ ಸೇರ್ಪಡೆಯಲ್ಲಿ ಸೋಮವಾರ ಅಲ್ಪಪ್ರಮಾಣ ದಲ್ಲಿ ಇಳಿಕೆ ಕಂಡುಬಂದರೂ ಮಂಗಳವಾರ ಮತ್ತೆ 61531 ಹೊಸ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23 ಲಕ್ಷ ದಾಟಿರುವುದು ಅಂಕಿ ಅಂಶ ತಿಳಿಸುತ್ತದೆ.

ಸಾವಿನ ಸಂಖ್ಯೆಯೂ ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದ್ದು, ಮಂಗಳವಾರ 852 ಮಂದಿ ಮೃತಪಟ್ಟಿದ್ದಾರೆ. ದೇಶದಲ್ಲಿ ಗುಣಮುಖರಾದವರ ಸಂಖ್ಯೆ 16.3 ಲಕ್ಷ ದಾಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5000ದಷ್ಟು ಹೆಚ್ಚಿ 6,46,927ಕ್ಕೇರಿದೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಪ್ರಗತಿ ದರ ಮಾತ್ರ ಕುಂಠಿತವಾಗಿದೆ. ಆಗಸ್ಟ್ ತಿಂಗಳ ಮೊದಲ ಹತ್ತು ದಿನಗಳಲ್ಲಿ ಸಕ್ರಿಯ ಪ್ರಕರಣಗಳು 76,572ರಷ್ಟು ಹೆಚ್ಚಿವೆ. ಆದರೆ ಜುಲೈ 22-31ರ ಅವಧಿಯಲ್ಲಿ 1,52,195 ಸಕ್ರಿಯ ಪ್ರಕರಣಗಳು ಸೇರ್ಪಡೆಯಾಗಿದ್ದವು. ಆಗಸ್ಟ್ 1-10ರ ಅವಧಿಯಲ್ಲಿ 5.7 ಲಕ್ಷ ಹೊಸ ಪ್ರಕರಣಗಳು ವರದಿಯಾಗಿದ್ದರೆ, ಹಿಂದಿನ 10 ದಿನಗಳಲ್ಲಿ ಕೇವಲ 5 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಜುಲೈ 12-21ರ ಅವಧಿಯಲ್ಲಿ ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 1.2 ಲಕ್ಷದಷ್ಟು ಹೆಚ್ಚಿತ್ತು.

ಮಂಗಳವಾರ ಉತ್ತರ ಪ್ರದೇಶ (5130), ಬಿಹಾರ (4071), ಅಸ್ಸಾಂ (2900), ರಾಜಸ್ಥಾನ (1217) ಮತ್ತು ಹರ್ಯಾಣ (798) ದಿನದ ಗರಿಷ್ಠ ಪ್ರಕರಣಗಳನ್ನು ಕಂಡಿವೆ. ಮಹಾರಾಷ್ಟ್ರದಲ್ಲಿ 11 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,35,601 ಕ್ಕೇರಿದೆ. ಆದರೆ ಕಳೆದ 14 ದಿನಗಳಲ್ಲೇ ಕನಿಷ್ಠ ಅಂದರೆ 256 ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಸೋಂಕಿಗೆ ರಾಜ್ಯದಲ್ಲಿ 18306 ಮಂದಿ ಬಲಿಯಾಗಿದ್ದಾರೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News