ಜಿಲ್ಲಾ ವೈದ್ಯ ರಜೆಯಲ್ಲಿದ್ದಾಗ ಮಹಿಳೆಯ ಹೆರಿಗೆ ಮಾಡಿಸಿದ ಮಿಝೋರಾಂ ಶಾಸಕ!

Update: 2020-08-13 04:02 GMT

ಹೊಸದಿಲ್ಲಿ, ಆ.13: ಮಿಝೋರಾಂನ ಚಂಪಾಯ್ ಜಿಲ್ಲೆಯ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕ ಝೆಡ್.ಆರ್.ಥ್ಯಾಮ್ಸಂಗಾ ಮಹಿಳೆಯೊಬ್ಬರಿಗೆ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದ ಅಪರೂಪದ ಪ್ರಕರಣ ವರದಿಯಾಗಿದೆ.

ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಜಿಲ್ಲೆಯ ಸರ್ಕಾರಿ ಆಸ್ಪತ್ರೆ ವೈದ್ಯರು ರಜೆಯ ಮೇಲಿದ್ದ ಕಾರಣದಿಂದ ಚಿಕಿತ್ಸೆಗೆ ಯಾರೂ ಲಭ್ಯರಿರಲಿಲ್ಲ. ಆದರೆ ಶಾಸಕ ತುರ್ತು ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ಮಹಿಳೆಯ ಹೆರಿಗೆ ಮಾಡಿಸಿದರು.

ಮೂಲತಃ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾಗಿದ್ದ ಥ್ಯಾಮ್ಸಂಗಾ ಸೋಮವಾರ, ಭೂಕಂಪ ಪೀಡಿತ ಪ್ರದೇಶಗಳ ಪರಿಸ್ಥಿತಿ ಮತ್ತು ಕೋವಿಡ್-19 ಪರಿಸ್ಥಿತಿ ಅವಲೋಕನಕ್ಕಾಗಿ ಚಂಪಾಯಿ ಜಿಲ್ಲೆಗೆ ಭೇಟಿ ನೀಡಿದ್ದರು. ಮುಂಜಾನೆ ಗರ್ಭಿಣಿಯೊಬ್ಬರು ಗಂಭೀರ ಸ್ಥಿತಿಯಲ್ಲಿರುವ ಬಗ್ಗೆ ಶಾಸಕರಿಗೆ ಮಾಹಿತಿ ಸಿಕ್ಕಿತು.

ನೂರ್ ಎಂಬ ಹಳ್ಳಿಯ ಈ ಮಹಿಳೆಗೆ ಹೆರಿಗೆ ನೋವು ತೀವ್ರವಾಗಿ, ತೀವ್ರ ಸ್ರಾವದ ಕಾರಣದಿಂದ ಸ್ಥಿತಿ ಚಿಂತಾಜನಕವಾಗಿತ್ತು. ಮಹಿಳೆಯ ಹಿಮೋಗ್ಲೋಬಿನ್ ಪ್ರಮಾಣ ಕೂಡಾ ಕುಸಿದಿತ್ತು ಎಂದು ಅವರು ವಿವರಿಸಿದ್ದಾರೆ. ಜಿಲ್ಲೆಯ ವೈದ್ಯ ರಜೆಯಲ್ಲಿದ್ದು, ಇತರ ಸುಸಜ್ಜಿತ ಆಸ್ಪತ್ರೆ ಇದ್ದುದು 200 ಕಿಲೋಮೀಟರ್ ದೂರದ ಐಜ್ವಾಲ್‌ನಲ್ಲಿ. ಈ ಹಿನ್ನೆಲೆಯಲ್ಲಿ ಮಹಿಳೆಯ ಮತ್ತು ಮಗುವಿನ ಪ್ರಾಣರಕ್ಷಣೆಗಾಗಿ ತಾವೇ ಈ ವೈದ್ಯಕೀಯ ತುರ್ತು ಸ್ಥಿತಿ ನಿಭಾಯಿಸಲು ಮುಂದಾದರು.

ಬೆಳಗ್ಗೆ 9:30ಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ತಾಯಿ- ಮಗು ಸುರಕ್ಷಿತವಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News