ಮಸೀದಿ ಸಂಕೀರ್ಣ ನಿರ್ಮಾಣಕ್ಕೆ ಅಯೋಧ್ಯೆಯ ಹಿಂದೂಗಳಿಂದ ಬೆಂಬಲ

Update: 2020-08-13 06:41 GMT

ಲಕ್ನೋ, ಆ.13: ಉತ್ತರಪ್ರದೇಶದ ಅಯೋಧ್ಯೆಯ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಪ್ರಸ್ತಾವಿತ ಮಸೀದಿ ಸಂಕೀರ್ಣಕ್ಕೆ ಹಿಂದೂಗಳು ಭಾರೀ ಬೆಂಬಲ ವ್ಯಕ್ತಪಡಿಸಿದ್ದು ಕನಿಷ್ಠ ಶೇ.60ರಷ್ಟು ಮಂದಿ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಕಟ್ಟಡ ನಿರ್ಮಾಣದ ಟ್ರಸ್ಟ್ ತಿಳಿಸಿದೆ. ಈ ಮೂಲಕ ದಶಕಗಳ ಬಳಿಕ ವಿವಾದಿತ ಸ್ಥಳದಲ್ಲಿ ಕೋಮು ಸೌಹಾರ್ದತೆ ಮರಳುವ ವಿಶ್ವಾಸ ಮೂಡಿದೆ.

ರಾಮ ಜನ್ಮಭೂಮಿ - ಬಾಬರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿ ಕಳೆದ ವರ್ಷದ ನವಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್‌ಗೆ ಆಗಸ್ಟ್ 2ರಂದು 5 ಎಕರೆ ಭೂಮಿಯನ್ನು ಹಸ್ತಾಂತರಿಸಲಾಗಿದೆ. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ 2.77 ಎಕರೆ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಅನುವು ಮಾಡಿಕೊಟ್ಟಿದ್ದ ಸುಪ್ರಿಂ ಕೋರ್ಟ್ 1992ರ ಡಿಸೆಂಬರ್‌ನಲ್ಲಿ ಧ್ವಂಸಗೊಂಡಿದ್ದ ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಮುಸ್ಲಿಮರಿಗೆ ಪರ್ಯಾಯ ಸ್ಥಳವನ್ನು ನೀಡಿದೆ.

"ನಮಗೆ ವಿಶ್ವದ ಎಲ್ಲೆಡೆಯಿಂದ ಭಾರೀ ಬೆಂಬಲ ವ್ಯಕ್ತವಾಗಿದ್ದು ದೇಣಿಗೆ ನೀಡುವ ಕುರಿತಂತೆ ಸಾಕಷ್ಟು ಕರೆಗಳನ್ನು ಸ್ವೀಕರಿಸಿದ್ದೇವೆ. ಹಿಂದೂಗಳಿಂದ ಶೇ. 60ರಷ್ಟು ಕರೆಗಳು ಬಂದಿವೆ. ಯೋಜನೆಗಾಗಿ ಟ್ರಸ್ಟ್‌ನಲ್ಲಿ ಸಾಕಷ್ಟು ನಿಧಿಗಳಿವೆ. ಆ ಸ್ಥಳದಲ್ಲಿ ಮಸೀದಿಯಲ್ಲದೆ ಆಸ್ಪತ್ರೆ, ಸಮುದಾಯ ಅಡುಗೆ ಮನೆ ಹಾಗೂ ಶಿಕ್ಷಣ ಕೇಂದ್ರಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ'' ಎಂದು ಮಸೀದಿ ನಿರ್ಮಾಣ ಸ್ಥಳದ ಅಭಿವೃದ್ಧಿಗಾಗಿ ವಕ್ಫ್ ಬೋರ್ಡ್ ರಚಿಸಿದ್ದ 15 ಸದಸ್ಯರ ಟ್ರಸ್ಟ್ ಹಿಂದೂ ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್‌ನ ವಕ್ತಾರ ಅಥರ್ ಹುಸೈನ್ ಹೇಳಿದ್ದಾರೆ.

ಟ್ರಸ್ಟ್ ಲಕ್ನೊದಲ್ಲಿ ಕಚೇರಿಯನ್ನು ತೆರೆದಿದ್ದು ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಪ್ರಕ್ರಿಯೆ ಕಾರ್ಯ ಆರಂಭಿಸಿದೆ. ಮಂಗಳವಾರ 2 ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಮಸೀದಿ ನಿರ್ಮಾಣಕ್ಕೆ ಮಂಜೂರಾಗಿರುವ ಧನ್ನೀಪುರ ಗ್ರಾಮಕ್ಕೆ ಟ್ರಸ್ಟ್ ಸದಸ್ಯರು ಭೇಟಿ ನೀಡುವ ಯೋಜನೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News