ಸ್ವದೇಶಿ ಎಂದರೆ ಎಲ್ಲಾ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದಲ್ಲ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2020-08-13 11:36 GMT

ನಾಗ್ಪುರ್:  ಸ್ವದೇಶಿ ಎಂದರೆ ಎಲ್ಲಾ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸುವುದು ಎಂದಲ್ಲ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ದೇಶದಲ್ಲಿ ಸ್ಥಳೀಯವಾಗಿ ಲಭ್ಯವಿಲ್ಲದ ಹಾಗೂ ದೇಶದಲ್ಲಿ ಕೊರತೆಯಿರುವ ತಂತ್ರಜ್ಞಾನ ಹಾಗೂ ವಸ್ತುಗಳನ್ನು ಮಾತ್ರ  ಆಮದು ಮಾಡಬೇಕೆಂದೂ ಅವರು ಹೇಳಿದ್ದಾರೆ.

ಕೋವಿಡ್-19 ಸಮಸ್ಯೆಯಿರುವ ಈಗಿನ ಕಾಲದಲ್ಲಿ ಸ್ವಾವಲಂಬಿ ಹಾಗೂ ಸ್ವದೇಶಿ ಆಗಿರಬೇಕಾದ ಅಗತ್ಯತೆಯನ್ನು ವಿವರಿಸಿದ ಅವರು, ಜಾಗತೀಕರಣ ನಿರೀಕ್ಷಿತ ಫಲಿತಾಂಶ ನೀಡಿಲ್ಲ ಎಂಬುದನ್ನು ಕೋವಿಡ್ ಸಮಸ್ಯೆ ಸ್ಪಷ್ಟಪಡಿಸಿದೆಯಲ್ಲದೆ ಒಂದೇ ಆರ್ಥಿಕ ಮಾದರಿ ಎಲ್ಲಾ  ಕಡೆಗಳಿಗೂ ಅನ್ವಯವಾಗದು ಎಂಬುದನ್ನೂ ಸಾಬೀತುಪಡಿಸಿದೆ ಎಂದು ಹೇಳಿದರು.

ವರ್ಚುವಲ್ ಕೃತಿ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಸ್ವಾವಲಂಬಿ ದೇಶಗಳ ನಡುವೆ ಪರಸ್ಪರ ಸಹಕಾರ ಹಾಗೂ ಜಗತ್ತನ್ನು ಒಂದೇ ಮಾರುಕಟ್ಟೆ ಎಂದು ಪರಿಗಣಿಸದೆ ಒಂದೇ ಕುಟುಂಬವೆಂದು ಪರಿಗಣಿಸುವಂತಹ ಆರ್ಥಿಕ ಮಾದರಿ ಕೋವಿಡ್ ನಂತರದ ಜಗತ್ತಿಗೆ ಬೇಕಾಗಿದೆ ಎಂದು ಅವರು ಹೇಳಿದರು.

ಸ್ವಾವಲಂಬಿ ಭಾರತ ಪರಿಕಲ್ಪನೆಗೆ ಬಿಜೆಪಿ ನೇತೃತ್ವದ ಎನ್‍ ಡಿಎ ಸರಕಾರ ನೀಡುತ್ತಿರುವ ಮಹತ್ವವನ್ನು ಬೆಂಬಲಿಸಿದ ಅವರು  ಸ್ವದೇಶಿ ಎಂದರೆ ದೇಶೀಯ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಪ್ರೋತ್ಸಾಹಿಸುವುದಾಗಿದೆ ಹಾಗೂ ಎಲ್ಲಾ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದೇನಿಲ್ಲ ಎಂದರು.

ಜನರ ಮನಸ್ಥಿತಿ ಬದಲಾಗಬೇಕಿದೆ ಹಾಗೂ ದೇಶೀಯವಾಗಿ ಉತ್ಪಾದಿತವಾದ ವಸ್ತುಗಳು ಕಳಪೆ ಎಂಬ ಭಾವನೆಯನ್ನು ಹೋಗಲಾಡಿಸಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News