ಮಾಜಿ ಸಿಜೆಐ ರಂಜನ್ ಗೊಗೊಯಿ ಕಾರ್ಯ ನಿರ್ವಹಣೆಯ ತನಿಖೆ ಕೋರಿ ಸಲ್ಲಿಸಿದ್ದ ಅಪೀಲು ತಿರಸ್ಕರಿಸಿದ ಸುಪ್ರೀಂ

Update: 2020-08-21 09:41 GMT

ಹೊಸದಿಲ್ಲಿ: ರಂಜನ್ ಗೊಗೊಯಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದ ವೇಳೆ ಅವರ ನಡವಳಿಕೆ ಕುರಿತಂತೆ ತ್ರಿಸದಸ್ಯ ಸಮಿತಿ ರಚಿಸಿ ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅಪೀಲನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ರಂಜನ್ ಗೊಗೊಯಿ ಈಗಾಗಲೇ ನಿವೃತ್ತರಾಗಿರುವುದರಿಂದ ಹಾಗೂ ಕಳೆದೆರಡು ವರ್ಷಗಳಲ್ಲಿ ಅಪೀಲುದಾರ ಈ ಕುರಿತು ವಿಚಾರಣೆಗೆ ಅರ್ಜಿ ಸಲ್ಲಿಸಿಲ್ಲದ ಕಾರಣ ಈ ಪಿಐಎಲ್ ಅನ್ನು ಜಸ್ಟಿಸ್ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠ `ವ್ಯರ್ಥ' ಎಂದು ಬಣ್ಣಸಿದೆ.

“ಈ ಕುರಿತು ವಿಚಾರಣೆಗೆ ಕಳೆದೆರಡು ವರ್ಷಗಳಿಂದ ಅಪೀಲುದಾರರು ಏಕೆ ಒತ್ತಾಯಪಡಿಸಿಲ್ಲ? ಅವರು ಈಗ ಹುದ್ದೆಯಲ್ಲಿಲ್ಲದೇ ಇರುವುದರಿಂದ ಈ ಅಪೀಲು ವ್ಯರ್ಥ'' ಎಂದು ಜಸ್ಟಿಸ್ ಬಿ ಆರ್ ಗವಾಯಿ ಹಾಗೂ ಜಸ್ಟಿಸ್ ಕೃಷ್ಣ ಮುರಾರಿ ಅವರನ್ನೂ ಒಳಗೊಂಡಿರುವ ಪೀಠ ಹೇಳಿದೆ.

"ಕ್ಷಮಿಸಿ, ನಮಗೆ ಇದನ್ನು ಪುರಸ್ಕರಿಸಲು ಸಾಧ್ಯವಿಲ್ಲ'' ಎಂದು ಅಪೀಲುದಾರ ಅರುಣ್ ರಾಮಚಂದ್ರ ಹುಬ್ಳಿಕರ್ ಅವರಿಗೆ ಪೀಠ ಹೇಳಿತು. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ರಂಜನ್ ಗೊಗೊಯಿ ಅವರಿಂದ ನಡೆದಿದೆಯೆಂದು ಆರೋಪಿಸಲಾದ ಲೋಪಗಳ ಕುರಿತು ತನಿಖೆಗೆ ಅಪೀಲುದಾರರು ಕೋರಿದ್ದರು.

ತನ್ನ ಅಪೀಲನ್ನು ಶೀಘ್ರ ವಿಚಾರಣೆಗೆ ಎತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೆಕ್ರಟರಿ ಜನರಲ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಅವರು ಹೇಳಿದ್ದರು.

ಕಳೆದ ವರ್ಷದ ನವೆಂಬರ್ 17ರಂದು ನಿವೃತ್ತರಾಗಿದ್ದ ಜಸ್ಟಿಸ್ ರಂಜನ್ ಗೊಗೊಯಿ, ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News