×
Ad

ಸುದ್ದಿವಾಹಿನಿಗಳಲ್ಲಿನ ಚರ್ಚೆಗೆ ಬೆಲೆ ಇದೆಯೇ?

Update: 2020-08-21 22:58 IST

ಮಾನ್ಯರೇ,

ಇತ್ತೀಚೆಗೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ರಾಜಕೀಯ ಚರ್ಚೆಯಲ್ಲಿ ಪಾಲ್ಗೊಂಡ ಪಕ್ಷವೊಂದರ ವಕ್ತಾರರು ಹೃದಯಾಘಾತಕ್ಕೆ ಗುರಿಯಾಗಿ ಸಾವನ್ನಪ್ಪಿದ ವಿಚಾರದ ಹಿನ್ನೆಲೆಯಲ್ಲಿ ಗಮನಿಸುವುದಾದರೆ ಸುದ್ದಿವಾಹಿನಿಗಳಲ್ಲಿ ಆಗುವ ರಾಜಕೀಯ ಚರ್ಚೆಗಳಿಗೆ ಯಾವುದೇ ರೀತಿಯ ಬೆಲೆ ಇರುವುದಿಲ್ಲ. ಏಕೆಂದರೆ ಬಹುತೇಕ ಸುದ್ದಿವಾಹಿನಿಗಳು ಆಡಳಿತ ಪಕ್ಷಗಳ ಪರವಾಗಿಯೇ ಇವೆೆ. ಇನ್ನು ಕನ್ನಡ ಮಾಧ್ಯಮ ಸೇರಿದಂತೆ ಬಹಳಷ್ಟು ಸುದ್ದಿವಾಹಿನಿಗಳಲ್ಲಿನ ಸುದ್ದಿವಾಚಕರು ಸುದ್ದಿ ವಿಶ್ಲೇಷಕರಾಗಿದ್ದಾರೆ. ಅವರೇ ನ್ಯಾಯಾಧೀಶರಾಗಿಯೂ ಕೂಡಲೇ ತೀರ್ಪನ್ನು ನೀಡಿ ಬಿಡುತ್ತಾರೆ. ಇನ್ನು ಚರ್ಚೆಯಲ್ಲಿ ಭಾಗವಹಿಸುವ ವಾಹಿನಿಯ ಪ್ರತಿನಿಧಿಗಳು ಪಕ್ಷಪಾತದಿಂದ ಮಾತನಾಡುತ್ತಾರೆ. ಅವರು ಆಡಳಿತ ಪಕ್ಷದ ಪರವಾಗಿಯೇ ತಮ್ಮ ಚರ್ಚೆಯನ್ನು ತಂದು ನಿಲ್ಲಿಸುತ್ತಾರೆ.

ಚರ್ಚೆಯಲ್ಲಿ ಪಾಲ್ಗೊಂಡಿರುವ ರಾಜಕೀಯ ಪಕ್ಷದ ಪ್ರತಿನಿಧಿಗಳು ಎಷ್ಟೇ ಹಿರಿಯರಾದರೂ, ಅನುಭವಶಾಲಿಗಳಾಗಿದ್ದರೂ ಅವೆಲ್ಲವನ್ನೂ ಪರಿಗಣಿಸದೆ, ಅವರು ತಮ್ಮ ವಿಚಾರವನ್ನು ತಿಳಿಸಲು ಅವಕಾಶವನ್ನ್ನೂ ನೀಡದೆ ಪದೇಪದೇ ಮೂಗು ತೂರಿಸುತ್ತಾ ತಾವೇ ಬೃಹಸ್ಪತಿಗಳೆಂಬ ರೀತಿಯಲ್ಲಿ ಮೆರೆಯುತ್ತಾರೆ. ಚರ್ಚೆಯಲ್ಲಿ ಪ್ರಸ್ತಾಪಿಸಲ್ಪಡುವ ವಿಷಯಗಳ ಜ್ಞಾನವಿಲ್ಲದಿದ್ದರೂ ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ಬಂದ ಪ್ರತಿನಿಧಿಗಳ ಮೇಲೆ ಏರುಧ್ವನಿಯ ಮಾತಿನ ಮೂಲಕ ನಿಯಂತ್ರಿಸುತ್ತಾ ತಮ್ಮ ಗುಪ್ತ ಮಾರ್ಗಸೂಚಿಯನ್ನು ಬಹಿರಂಗವಾಗಿ ಪ್ರಕಟಿಸದಿದ್ದರೂ ಚರ್ಚೆಯಲ್ಲಿ ಅದನ್ನು ಹೆಚ್ಚಾಗಿ ವೈಭವೀಕರಿಸುತ್ತಾರೆ. ಸುದ್ದಿವಾಹಿನಿಗಳಲ್ಲಿ ಅರ್ಧ ಗಂಟೆಯ ಅಥವಾ ಒಂದು ಗಂಟೆಯ ಚರ್ಚೆಯಲ್ಲಿ ಸುಮಾರು 45 ನಿಮಿಷಗಳ ಕಾಲ ಸುದ್ದಿವಾಹಿನಿಯ ಪ್ರತಿನಿಧಿಗಳೇ ಆರ್ಭಟಿಸುತ್ತಾರೆ. ತಮಗೆ ಇಷ್ಟವಾಗುವ ರೀತಿಯಲ್ಲಿ ಅಥವಾ ತಮ್ಮ ವಾಹಿನಿಯ ಟಿಆರ್‌ಪಿ ಏರಿಕೆಯಾಗುವ ರೀತಿಯಲ್ಲಿ ಯಾರು ಮಾತನಾಡುತ್ತಾರೋ ಅವರನ್ನು ಹೆಚ್ಚು ಸಮಯ ಮಾತನಾಡಲು ಅವಕಾಶ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯಲ್ಲಿನ ಚರ್ಚೆಗಳಿಗೆ ಯಾವ ಬೆಲೆಯೂ ಇಲ್ಲ. ಕೇವಲ ಕೂಗಾಟ, ಕಿತ್ತಾಟ, ಅರಚಾಟ, ಆರ್ಭಟಗಳಿಗೆ ಸೀಮಿತವಾಗಿರುತ್ತವೆ. ವೀಕ್ಷಕರಿಗೆ ಯಾವ ಮಾಹಿತಿಯೂ ದೊರೆಯುವುದಿಲ್ಲ. ಅಂತಿಮವಾಗಿ ಯಾವ ಅಭಿಪ್ರಾಯವೂ ಹೊರಬರುವುದಿಲ್ಲ.

ಈ ಹಿಂದೆ ಸುದ್ದಿವಾಚಕರು ಸುದ್ದಿಯನ್ನು ಮಾತ್ರ ಓದುತ್ತಿದ್ದರು. ಅವರು ವಿಮರ್ಶಕರಾಗಿ ರಲಿಲ್ಲ, ಪಕ್ಷಪಾತಿಗಳಾಗಿರುತ್ತಿರಲಿಲ್ಲ, ಸರ್ವಜ್ಞ ಎಂಬ ಧೋರಣೆಯೂ ಇರುತ್ತಿರಲಿಲ್ಲ. ಪತ್ರಿಕಾ ಧರ್ಮದ ನೈತಿಕತೆಯನ್ನು ಉಳಿಸಿಕೊಂಡಿದ್ದರು. ಇಂದು ಜೋರಾಗಿ ಆರ್ಭಟಿಸುವ, ಒಂದು ಪಕ್ಷದ ಪರವಾಗಿ ಮಾತನಾಡುವ ಸುದ್ದಿವಾಚಕರು ಸುದ್ದಿವಾಹಿನಿಗಳ ಸಂಪಾದಕರಾಗುತ್ತಾ, ಆಕಾಶದಿಂದ ಇಳಿದುಬಂದವರ ರೀತಿಯಲ್ಲಿ ತಮ್ಮ ವಯಸ್ಸನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಸುದ್ದಿವಾಹಿನಿಗಳಲ್ಲಿನ ಚರ್ಚೆಗಳನ್ನು ಗಮನಿಸುತ್ತಾ ಹೋದರೆ ಮುಂದೊಂದು ದಿನ ಅಲ್ಲಿಯೇ ಹೊಡೆದಾಟಗಳಾದರೂ ಹೆಚ್ಚಲ್ಲ.

Similar News