×
Ad

ಕೇರಳದ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ ಯುಡಿಎಫ್

Update: 2020-08-24 13:54 IST

ತಿರುವನಂತಪುರಂ : "ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಬ್ಬ ಗೌರವಾನ್ವಿತ ವ್ಯಕ್ತಿ. ಆದರೆ ದುರದೃಷ್ಟವಶಾತ್ ಅವರು  ಬಿರುಗಾಳಿಯಲ್ಲಿ ಸಿಲುಕಿರುವ ಹಡಗಿನ ಕ್ಯಾಪ್ಟನ್ ಆಗಿದ್ದಾರೆ'' ಎಂದು ಕೇರಳದ ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್  ನೇತೃತ್ವದ ಯುಡಿಎಫ್ ಶಾಸಕ ವಿ ಡಿ ಸತೀಶನ್ ಹೇಳಿದರು.

ದೇಶಾದ್ಯಂತ ಸುದ್ದಿಯಾದ ರಾಜತಾಂತ್ರಿಕ ಆಶ್ರಯದಲ್ಲಿ ನಡೆದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಎಂ ಕಚೇರಿಯ ಶಾಮೀಲಾತಿ ಆರೋಪ ಹಾಗೂ  ಬಡವರಿಗಾಗಿನ ಲೈಫ್ ಮಿಷನ್ ಗೃಹ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಸಹಿತ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ.

ಈ ಅವಿಶ್ವಾಸ ನಿಲುವಳಿಯ ಕುರಿತಂತೆ ಸದನ ಐದು ಗಂಟೆಗಳ ಕಾಲ ಚರ್ಚೆ ನಡೆಸಲಿದ್ದ ಸಿಎಂ ವಿಜಯನ್ ಮತ್ತವರ ಸಚಿವರು ಅದಕ್ಕೆ ಉತ್ತರ ನೀಡಲಿದ್ದಾರೆ.

ಅಧಿವೇಶನ ಆರಂಭಗೊಳ್ಳುತ್ತಲೇ ಚಿನ್ನ ಸ್ಮಗ್ಲಿಂಗ್ ಪ್ರಕರಣದ ಆರೋಪಿಗಳೊಂದಿಗೆ ಸ್ಪೀಕರ್ ಪಿ ಶ್ರೀರಾಮಕೃಷ್ಣನ್ ಅವರು ‘ಶಂಕಾಸ್ಪದವಾಗಿ ನಿಕಟ’ವಾಗಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಹುದ್ದೆಯಿಂದ ಇಳಿಸಬೇಕೆಂದು ಆಗ್ರಹಿಸಿ ವಿಪಕ್ಷಗಳು ಗೊತ್ತುವಳಿ ಮಂಡಿಸಲು ಯತ್ನಿಸಿದರೂ ಸ್ಪೀಕರ್ ಅದಕ್ಕೆ ಅನುಮತಿಸಲಿಲ್ಲ.

ಒಟ್ಟು 140 ಸದಸ್ಯರ ಬಲದ ಸದನದಲ್ಲಿ  ಎಲ್‍ಡಿಎಫ್ ನ 91 ಸದಸ್ಯರಿದ್ದರೆ, ಯುಡಿಎಫ್‍ಗೆ 45 ಸದಸ್ಯರ ಬೆಂಬಲ ಮಾತ್ರ ಇರುವುದರಿಂದ ಅವಿಶ್ವಾಸ ನಿರ್ಣಯ ಸರಕಾರಕ್ಕೆ ಯಾವುದೇ ಅಪಾಯವೊಡ್ಡುವುದಿಲ್ಲ. ಅಷ್ಟಕ್ಕೂ ಕೇರಳದಲ್ಲಿ ಸರಕಾರವೊಂದರ ವಿರುದ್ಧ ಅವಿಶ್ವಾಸ ಮಂಡನೆಯಾಗಿರುವುದು ಕಳೆದ 15 ವರ್ಷಗಳಲ್ಲಿ ಇದು ಮೊದಲ ಬಾರಿ. 2005ರಲ್ಲಿ ಆಗಿನ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಉಮ್ಮನ್ ಚಾಂಡಿ ಸರಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಅವಿಶ್ವಾಸ ನಿರ್ಣಯ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News