×
Ad

ಫೇಸ್ ಬುಕ್ ಆಂತರಿಕ ಗ್ರೂಪ್ ನಲ್ಲಿ ಮೋದಿಯನ್ನು ಹೊಗಳಿ, ಬಿಜೆಪಿ ಗೆಲುವಿಗೆ ಸಂಭ್ರಮಿಸಿ ಪೋಸ್ಟ್ ಹಾಕಿದ್ದ ಅಂಖಿ ದಾಸ್

Update: 2020-08-31 14:10 IST

ಹೊಸದಿಲ್ಲಿ: ಫೇಸ್ ಬುಕ್ ಬಿಜೆಪಿ ಪರ ನಿಲುವು ತಳೆದಿದೆ ಹಾಗೂ ಬಿಜೆಪಿ ನಾಯಕರ ದ್ವೇಷಯುಕ್ತ ಪೋಸ್ಟ್ ‍ಗಳ ವಿರುದ್ಧ ತನ್ನ ನೀತಿಯಂತೆ ಕ್ರಮ ಕೈಗೊಂಡಿಲ್ಲ ಎಂದು Wall Street Journal  ಕೆಲ ದಿನಗಳ ಹಿಂದೆ ಪ್ರಕಟಿಸಿದ ಸುದ್ದಿಯಿಂದ ಸಾಕಷ್ಟು ಟೀಕೆಗಳನ್ನು ಈಗಾಗಲೇ ಎದುರಿಸಿರುವ ಫೇಸ್ ಬುಕ್ ಇಂಡಿಯಾದ ಪಬ್ಲಿಕ್ ಪಾಲಿಸಿ ಎಕ್ಸಿಕ್ಯೂಟಿವ್ ಅಂಖಿ ದಾಸ್ ಇದೀಗ ಅಂತಹುದೇ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.

'ವಾಲ್ ಸ್ಟ್ರೀಟ್ ಜರ್ನಲ್' ಆಗಸ್ಟ್ 30ರ ತನ್ನ ಲೇಖನದಲ್ಲಿ ಆಕೆಯ ಕುರಿತು ಮತ್ತಷ್ಟು ಮಾಹಿತಿ ಹೊರಗೆಡಹಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಹಾಗೂ ಬಿಜೆಪಿ ಗೆಲುವು ಸಾಧಿಸುವ ಮುನ್ನಾ ದಿನ  ಭಾರತದಲ್ಲಿ ಫೇಸ್ ಬುಕ್ ಉದ್ಯೋಗಿಗಳಿಗಿರುವ ಆಂತರಿಕ ಗ್ರೂಪ್ ನಲ್ಲಿ ಅಂಖಿ ದಾಸ್, “ಅವರ ಸೋಶಿಯಲ್ ಮೀಡಿಯಾ ಅಭಿಯಾನ ನಾವು ಆರಂಭಿಸಿದೆವು ಹಾಗೂ ಉಳಿದದ್ದೆಲ್ಲವೂ ಇತಿಹಾಸ” ಎಂದು ಪೋಸ್ಟ್ ಮಾಡಿದ್ದರೆಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳಿದೆ.

ಅಷ್ಟೇ ಅಲ್ಲದೆ ಪ್ರತಿ ಬಾರಿ ಬಿಜೆಪಿ, ಮುಖ್ಯವಾಗಿ ಮೋದಿ ಚುನಾವಣೆಯಲ್ಲಿ ಲಾಭ ಸಾಧಿಸಿದಾಗಲೆಲ್ಲಾ ಆಕೆ ಇಂತಹುದೇ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಕ್ಟೋಬರ್ 2012ರಲ್ಲಿ ಮೋದಿಯ ಬಿಜೆಪಿ ತಂಡದ ತರಬೇತಿ ಕಾರ್ಯಕ್ರಮದ ಕುರಿತಂತೆ “ಸಕ್ಸಸ್ ಇನ್ ಅವರ್ ಗುಜರಾತ್ ಕ್ಯಾಂಪೇನ್” ಎಂದು ಆಕೆ ಬರೆದಿದ್ದರು.

ಅಂಖಿ ದಾಸ್ ಅವರು ಮೋದಿಯನ್ನು ‘ಭಾರತದ ಜಾರ್ಜ್ ಡಬ್ಲ್ಯು ಬುಷ್’ ಎಂದು ಬಣ್ಣಿಸಿದ್ದರು ಎಂದು ಆಕೆಯ ಫೇಸ್ ಬುಕ್ ಸಹೋದ್ಯೋಗಿ ಹಾಗೂ ಫೇಸ್ ಬುಕ್ ನ ಉನ್ನತ ಅಧಿಕಾರಿ ಕ್ಯಾಟಿ ಹರ್ಬತ್ ಹೇಳಿದ್ದರು ಎಂದು ಲೇಖನದಲ್ಲಿ  ತಿಳಿಸಲಾಗಿದೆ.

ದೇಶದ ಮೇಲೆ ಕಾಂಗ್ರೆಸ್ ಹಿಡಿತವನ್ನು ಅಂತ್ಯಗೊಳಿಸಿದ `ಬಲಾಢ್ಯ' ಎಂದು ಮೋದಿಯನ್ನು ದಾಸ್ ಹೊಗಳಿರುವ ಕುರಿತು ಇತರ ಪೋಸ್ಟ್ ಗಳಿವೆಯೆನ್ನಲಾಗಿದೆ. ಫೇಸ್ ಬುಕ್‍ನ ಆದ್ಯತೆಗಳನ್ನು ಬಿಜೆಪಿಯ ಚುನಾವಣಾ ಅಭಿಯಾನದ ಭಾಗವನ್ನಾಗಿಸಲು ಫೇಸ್ ಬುಕ್ ಬಿಜೆಪಿ ಜತೆ ಲಾಬಿ ನಡೆಸಿತ್ತು ಎಂದು 2014ಗಿಂತ ಮುನ್ನ ಅಂಖಿ ದಾಸ್ ಬರೆದಿದ್ದರೆನ್ನಲಾಗಿದೆ. “ಈಗ ಅವರು ಸುಮ್ಮನೆ ಹೋಗಿ ಚುನಾವಣೆ ಗೆಲ್ಲಬೇಕಿದೆ,'' ಎಂದೂ ಅವರು ಆಂತರಿಕ ಗ್ರೂಪ್‍ ನಲ್ಲಿ ಪೋಸ್ಟ್ ಮಾಡಿದ್ದರು ಎಂದು ವಾಲ್ ಸ್ಟ್ರೀಟ್ ಜರ್ನಲ್‍ ನ ಹೊಸ ಲೇಖನದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News