×
Ad

ಉತ್ತರಪ್ರದೇಶ: ಕಳ್ಳತನದ ಶಂಕೆಯಲ್ಲಿ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದರು

Update: 2020-09-05 13:17 IST

ಲಕ್ನೋ, ಸೆ. 5: ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುವಾರ ಗುಂಪೊಂದು 32 ವರ್ಷದ ಯುವಕನೋರ್ವನನ್ನು ಕಳ್ಳನೆಂದು ಶಂಕಿಸಿ ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ಈ ಹಲ್ಲೆಯಲ್ಲಿ ಹಲವರು ಪಾಲ್ಗೊಂಡಿದ್ದು, ಘಟನೆಯ ವೀಡಿಯೊ ಹಾಗೂ ಫೋಟೊಗಳನ್ನು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.

ಕಳ್ಳನೆಂದು ಶಂಕಿಸಿ ವಾಸಿದ್ ಖಾನ್ ಎಂಬಾತನನ್ನು ಇಬ್ಬರು ಭದ್ರತಾ ಸಿಬ್ಬಂದಿ ಗುರುವಾರ ರಾತ್ರಿ ಸೆರೆ ಹಿಡಿದಿದ್ದರು. ಕೂಡಲೇ ಸ್ಥಳದಲ್ಲಿ ಗುಂಪು ಸೇರಿದ ಜನರು ಆತನನ್ನು ಮರಕ್ಕೆ ಕಟ್ಟಿ ಹಾಕಿದ್ದರು ಹಾಗೂ ಪ್ರಜ್ಞೆ ಕಳೆದುಕೊಳ್ಳುವ ವರೆಗೆ ಥಳಿಸಿದ್ದರು. ಅನಂತರ ಆತನನ್ನು ಪೊಲೀಸರಿಗೆ ಹಸ್ತಾಂತರಿಸಿದ್ದರು. ಪೊಲೀಸರು ವಾಸಿದ್ ಖಾನ್‌ನನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಆದರೆ, ಯಾರೂ ಪ್ರಕರಣ ದಾಖಲಿಸದೇ ಇರುವುದರಿಂದ ಬಿಡುಗಡೆ ಮಾಡಿದ್ದರು. ಅನಂತರ ವಾಸಿದ್ ಖಾನ್‌ರ ಕುಟುಂಬ ಆತನನ್ನು ಆಸ್ಪತ್ರೆಗೆ ದಾಖಲಿಸಿತ್ತು. ಆದರೆ, ತೀವ್ರ ರಕ್ತ ಸ್ರಾವದಿಂದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಈ ಪ್ರದೇಶದಲ್ಲಿರುವ ಸರಕಾರಿ ಕಚೇರಿಯಿಂದ ಕೆಲವು ವಸ್ತುಗಳನ್ನು ಕಳವುಗೈದಿದ್ದಾನೆ ಎಂದು ಆರೋಪಿಸಿ ವಾಸಿದ್ ಖಾನ್‌ನನ್ನು ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಸ್ಥಳೀಯರು ಹಿಡಿದಿದ್ದರು ಎಂದಿದ್ದಾರೆ. ‘‘ವಾಸಿದ್ ಖಾನ್‌ಗೆ ಗುಂಪೊಂದು ಥಳಿಸಿದ ಬಳಿಕ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿತ್ತು. ಅನಂತರ ಕೆಲವರು ಇಲ್ಲಿಗೆ ಆಗಮಿಸಿದ್ದರು. ಕಳವುಗೈದ ವಸ್ತುಗಳನ್ನು ನಾವು ಹಿಂದೆ ಪಡೆದುಕೊಂಡಿದ್ದೇವೆ ಎಂದಿದ್ದರು ಹಾಗೂ ವಾಸಿದ್ ಖಾನ್ ತಮ್ಮ ನೆರೆಯವರು ಆಗಿರುವುದರಿಂದ ಪ್ರಕರಣ ದಾಖಲಿಸಲು ಬಯಸುವುದಿಲ್ಲ ಎಂದು ಹೇಳಿದ್ದರು’’ ಎಂದು ಬರೇಲಿಯ ಪೊಲೀಸ್ ಅಧೀಕ್ಷಕ ಸಂಸಾರ್ ಸಿಂಗ್ ತಿಳಿಸಿದ್ದಾರೆ.

‘‘ವಾಸಿದ್‌ರನ್ನು ಮರಕ್ಕೆ ಕಟ್ಟಿ ಹಾಕಿರುವ ಹಾಗೂ ಅವರಿಗೆ ಸ್ಥಳೀಯರು ಥಳಿಸುತ್ತಿರುವ ವೀಡಿಯೊವನ್ನು ನಾನು ಸ್ವೀಕರಿಸಿದ್ದೇನೆ. ಘಟನೆಯ ವೀಡಿಯೊ ದಾಖಲಿಸಿದ ಆರೋಪಿಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ’’ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಶೈಲೇಶ್ ಪಾಂಡೆ ಹೇಳಿದ್ದಾರೆ.

ಮೋಜಿಗಾಗಿ ಥಳಿಸಿದರು: ವಾಸಿದ್ ತಾಯಿ

ಗುಂಪು ಥಳಿಸುತ್ತಿರುವ ಸಂದರ್ಭ ವಾಸಿದ್ ಖಾನ್‌ನನ್ನು ರಕ್ಷಿಸುವಂತೆ ಆತನ ಕಿರಿಯ ಸಹೋದರನಿಗೆ ತಿಳಿಸಿದ್ದೆ. ಆದರೆ, ಆತ ಹೆದರಿ ಕೊಠಡಿಯಿಂದ ಹೊರಗೆ ಇಳಿಯಲಿಲ್ಲ. ಸ್ಥಳೀಯರು ಆತನಿಗೆ ಮೋಜಿಗಾಗಿ ಥಳಿಸಿದರು. ಅನಂತರ ಕೆಲವು ಪೊಲೀಸರು ಆತನನ್ನು ನನ್ನ ಮನೆಯ ಸಮೀಪ ಬಿಟ್ಟು ಹೋದರು ಎಂದು ವಾಸಿದ್‌ನ ತಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News