ಸುಶಾಂತ್ ಪ್ರಕರಣ; ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಸರಕಾರದ ಕಡಿವಾಣ ಇಲ್ಲ: ಹೈಕೋರ್ಟ್ ತರಾಟೆ

Update: 2020-09-11 03:49 GMT

ಮುಂಬೈ, ಸೆ.11: ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೇಲೆ ಸರಕಾರಿ ನಿಯಂತ್ರಣ ಏಕಿಲ್ಲ ಎಂದು ಬಾಂಬೆ ಹೈಕೋರ್ಟ್ ಗುರುವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಟಿವಿ ವಾಹಿನಿಗಳು ಪ್ರಕರಣದ ಬಗ್ಗೆ ವರದಿ ಮಾಡುವಾಗ ಸಂಯಮ ಹೊಂದಿರಬೇಕು ಎಂಬ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಕಾನೂನು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ನರೋಕ್ಟಿಕ್ಸ್ ಕಂಟ್ರೋಲ್ ಬ್ಯೂರೊ (ಎನ್‌ಸಿಬಿ)ಯನ್ನು ಕೂಡಾ ಪ್ರತಿವಾದಿಗಳಾಗಿ ಮಾಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಪ್ರಕರಣದ ಮಾಧ್ಯಮ ವಿಚಾರಣೆ ನಿರ್ಬಂಧಿಸುವಂತೆ ಮಹಾರಾಷ್ಟ್ರದ ಎಂಟು ಮಂದಿ ಮಾಜಿ ಅಧಿಕಾರಿಗಳು ಪಿಐಎಲ್ ಸಲ್ಲಿಸಿದ್ದರು. ತನಿಖಾ ಏಜೆನ್ಸಿಗಳು ಪ್ರಕರಣದ ವಿಚಾರಣೆ ಬಗೆಗಿನ ಮಾಹಿತಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿವೆ ಎಂದೂ ಕೋರ್ಟ್ ಹೇಳಿದೆ.

ಪಿಐಎಲ್‌ಗಳ ಬಗ್ಗೆ ನಿರ್ಧರಿಸುವ ವೇಳೆ ಪ್ರಧಾನ ಅಂಶಗಳಾಗುವ ಸಾಧ್ಯತೆ ಇರುವ ಸುದ್ದಿಗಳ ಪ್ರಸಾರ ವಿಚಾರದಲ್ಲಿ ಸರ್ಕಾರ ಕೈಗೊಂಡ ನಿಯಂತ್ರಣಾತ್ಮಕ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆಯೂ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಮಾಧ್ಯಮ ವಿಚಾರಣೆ ಪ್ರಕರಣವನ್ನು ನ್ಯೂಸ್ ಬ್ರಾಡ್‌ಕಾಸ್ಟರ್ಸ್‌ ಅಸೋಸಿಯೇಶನ್ (ಎನ್‌ಬಿಎ) ಗಮನಕ್ಕೆ ತರಲಾಗಿದೆ. ಎನ್‌ಬಿಎ ನಿರ್ಧಾರದ ಬಗ್ಗೆ ಪರಾಂರ್ಶೆ ನಡೆಸಲು ಸರ್ಕಾರ ಅಂತರ್ ಸಚಿವಾಲಯ ಸಮಿತಿಯನ್ನು ಹೊಂದಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನ್ಯಾಯಾಲಯಕ್ಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News