ಉ.ಪ್ರದೇಶ ಸರಕಾರದ ವಿರುದ್ಧ ಕೊರೋನ ಕಿಟ್ ಹಗರಣ ಆರೋಪ: ಬಿಜೆಪಿ ಶಾಸಕನಿಂದ ಆದಿತ್ಯನಾಥ್ ಗೆ ಪತ್ರ

Update: 2020-09-14 17:41 GMT

ಹೊಸದಿಲ್ಲಿ,ಸೆ.14: ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಬಿಜೆಪಿ ಸರಕಾರದ ವಿರುದ್ಧ ಕೋವಿಡ್-19 ಕಿಟ್ ಹಗರಣದ ಆರೋಪ ಕೇಳಿಬಂದಿದ್ದು, ಎಸ್ಪಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿವೆ.

ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಹಾಗೂ ನಾಡಿ ಪರಿಶೋಧಕಯಂತ್ರಗನ್ನು ಒಳಗೊಂಡ ಕೋವಿಡ್-19 ಕಿಟ್‌ಗಳ ಖರೀದಿಯಲ್ಲಿ ಭಾರೀ ಅಕ್ರಮಗಳು ನಡೆದಿವೆಯೆಂದು ಆರೋಪಿಸಿ, ಸುಲ್ತಾನ್‌ಪುರದ ಬಿಜೆಪಿ ಶಾಸಕ ದೇವಮಣಿ ದ್ವಿವೇದಿ ಸೆಪ್ಟೆಂಬರ್ 4ರಂದು ಪತ್ರ ಬರೆದಿದ್ದರು. ತನ್ನ ಜಿಲ್ಲೆಯಲ್ಲಿ, ತಲಾ 2800 ರೂ. ಮೌಲ್ಯದ ಕೋವಿಡ್-19 ಕಿಟ್‌ನ್ನು 9,950 ರೂ.ನಂತೆ ಖರೀದಿಸಲಾಗಿದೆ ಎಂದು ದ್ವಿವೇದಿ ಪತ್ರದಲ್ಲಿ ದೂರಿದ್ದರು.

 ರಾಜ್ಯದಲ್ಲಿ ಮನೆಮನೆಗಳಲ್ಲಿ ಕೊರೋನ ಸೋಂಕಿನ ತಪಾಸಣೆ ನಡೆಸುವುದಕ್ಕಾಗಿ ಉತ್ತರಪ್ರದೇಶದ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್-19 ಕಿಟ್‌ಗಳನ್ನು ಒದಗಿಸಲಾಗಿತ್ತು. ಜ್ವರದ ತಪಾಸಣೆಗಾಗಿ ಥರ್ಮಲ್ ಸ್ಕ್ಯಾನರ್, ಆಮ್ಲಜನಕದ ಮಟ್ಟವನ್ನು ಅಳೆಯಲು ಆಕ್ಸಿಮೀಟರ್ ಹಾಗೂ ನಾಡಿಬಡಿತದ ತಪಾಸಣೆಗೆ ನಾಡಿ ವಿಶ್ಲೇಷಕ ಇವನ್ನು ಕಿಟ್ ಒಳಗೊಂಡಿದೆ.

   ಕೋವಿಡ್-19 ಕಿಟ್‌ಗಳ ಖರೀದಿಯಲ್ಲಿನ ಹಗರಣವು ಕೇವಲ ಸುಲ್ತಾನ್‌ ಪುರದಲ್ಲಿ ಮಾತ್ರವಲ್ಲ, ಉತ್ತರಪ್ರದೇಶದ ಎಲ್ಲಾ 65 ಜಿಲ್ಲೆಗಳಲ್ಲಿ ನಡೆದಿದೆಯೆಂದು ಪ್ರತಿಪಕ್ಷಗಳು ಆಪಾದಿಸಿವೆ.

   ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದಿರುವ ರಾಜ್ಯ ಸರಕಾರವು, ಕೋವಿಡ್-19 ಕಿಟ್ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸಲು ಮೂವರು ಸದಸ್ಯರ ವಿಶೇಷ ತನಿಖಾ ತಂಡವೊಂದನ್ನು ನೇಮಿಸಿದೆ ಹಾಗೂ 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

  ಆದರೆ ಪ್ರತಿಪಕ್ಷಗಳಾದ ಎಎಪಿ, ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳ ಹಗರಣದ ಬಗ್ಗೆ ಸಿಬಿಐ ಅಥವಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಿಟ್‌ನಿಂದ ವಿಸ್ತೃತ ತನಿಖೆಗೆ ಆಗ್ರಹಿಸಿವೆ.

 ಹಗರಣಕ್ಕೆ ಸಂಬಂಧಿಸಿ ಆದಿತ್ಯನಾಥ್ ಸರಕಾರವು ಸುಲ್ತಾನ್‌ಪುರ ಹಾಗೂ ಗಾಜಿಯಾಬಾದ್ ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News