"ದಿಲ್ಲಿ ಚುನಾವಣೆ ಮೇಲೆ ಫೇಸ್ ಬುಕ್ ಮುಖಾಂತರ ಪ್ರಭಾವ ಬೀರಲು ಯತ್ನಿಸಿದ್ದ ಅತ್ಯುನ್ನತ ರಾಜಕೀಯ ಜಾಲ''

Update: 2020-09-15 07:22 GMT

ಹೊಸದಿಲ್ಲಿ : ಫೆಬ್ರವರಿಯಲ್ಲಿ ನಡೆದಿದ್ದ ದಿಲ್ಲಿ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಫೇಸ್ ಬುಕ್ ಮುಖಾಂತರ 'ಅತ್ಯುನ್ನತ ರಾಜಕೀಯ ಜಾಲ'ವೊಂದು ಕಾರ್ಯಾಚರಿಸಿತ್ತೆಂಬ ಸ್ಫೋಟಕ ಮಾಹಿತಿಯನ್ನು ಇತ್ತೀಚೆಗೆ ಫೇಸ್ ಬುಕ್ ಸಂಸ್ಥೆಯಿಂದ ಕೈಬಿಡಲಾದ ಡಾಟಾ ವಿಜ್ಞಾನಿ ಸೋಫಿ ಝಂಗ್ ಬಹಿರಂಗಪಡಿಸಿದ್ದಾರೆ. ಈ ರಾಜಕೀಯ ಜಾಲವನ್ನು ನಂತರ ಸದ್ದಿಲ್ಲದೆ  ಫೇಸ್ ಬುಕ್‍ನಿಂದ ತೆಗೆದು ಹಾಕಲಾಗಿದೆ ಎಂದೂ ಆಕೆ ಹೇಳಿದ್ದಾರೆ.

ಭಾರತ ಸಹಿತ ಉಕ್ರೇನ್, ಸ್ಪೇನ್, ಬ್ರೆಜಿಲ್, ಬೊಲಿವಿಯಾ ಹಾಗೂ ಇಕ್ವೇಡರ್ ದೇಶಗಳಲ್ಲಿ ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುವ ಯತ್ನಗಳನ್ನು ಸರಿಯಾದ ಸಮಯದಲ್ಲಿ ತಡೆಹಿಡಿಯುವ ನಿಟ್ಟಿನಲ್ಲಿ ಪಾರದರ್ಶಕತೆಯಿಂದ ಫೇಸ್ ಬುಕ್  ಹೇಗೆ ಕೆಲಸ ಮಾಡಿಲ್ಲ ಎಂದು ಸೋಫೀ ಉದಾಹರಣೆ ಸಹಿತ ತಮ್ಮ ಮೆಮೋದಲ್ಲಿ ವಿವರಿಸಿದ್ದಾರೆ.

ಅಮೆರಿಕಾದ ಡಿಜಿಟಲ್ ಮಾಧ್ಯಮ 'ಬಝ್‍ಫೀಡ್‍'ಗೆ ಸೋಫಿ ಅವರ ಮೆಮೋ ದೊರಕಿರುವ ಕುರಿತು ವರದಿಯಾಗಿದೆ. "ಚುನಾವಣೆ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದ ಸಾವಿರಾರು ಮಂದಿಯಿದ್ದ ಈ ಅತ್ಯುನ್ನತ ರಾಜಕೀಯ ಜಾಲವನ್ನು ತೆಗೆದು ಹಾಕಲು ಅನಾರೋಗ್ಯದ ಹೊರತಾಗಿಯೂ ಕೆಲಸ ಮಾಡಿದೆ,'' ಎಂದು ಸೋಫೀ ತಮ್ಮ 6,600 ಪದಗಳ ಮೆಮೋದಲ್ಲಿ ತಿಳಿಸಿದ್ದು, ಆಕೆಯ ಈ ಕ್ರಮವನ್ನು ಫೇಸ್ ಬುಕ್ ಅಧಿಕೃತ ದಾಖಲೆಗಳಲ್ಲಿ ಸೇರಿಸಿಲ್ಲ ಎಂದೂ ವಿವರಿಸಿದ್ದಾರೆ.

ಈ ಯತ್ನದ ಹಿಂದೆ ಯಾರಿದ್ದಾರೆಂದು ಆಕೆ ತಿಳಿಸಿಲ್ಲವಾದರೂ ಫೇಸ್ ಬುಕ್‍ನಲ್ಲಿ ತಾವು ಇದ್ದ ಮೂರು ವರ್ಷಗಳಲ್ಲಿ "ವಿವಿಧ ವಿದೇಶಿ ಸರಕಾರಗಳು ಫೇಸ್ ಬುಕ್ ವೇದಿಕೆಯನ್ನು ಬಳಸಿ ತಮ್ಮದೇ ನಾಗರಿಕರನ್ನು ತಪ್ಪು ದಾರಿಗೆಳೆಯಲು ಯತ್ನಿಸಿವೆ,'' ಎಂದು ಆಕೆ ಬರೆದಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿದ ಫೇಸ್ ಬುಕ್ ವಕ್ತಾರ ಲಿಝ್ ಬೌರ್ಜಿಯೊಸ್ "ನಮ್ಮ ವೇದಿಕೆಯನ್ನು ರ್ದುಬಳಕೆ ಮಾಡುವುದನ್ನು ತಡೆಯಲು ತಜ್ಞರನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದ್ದು  ಸೂಕ್ತವಲ್ಲದ ನಡವಳಿಕೆಗಾಗಿ 100ಕ್ಕೂ ಅಧಿಕ ನೆಟ್‍ವರ್ಕ್‍ಗಳನ್ನು ತೆಗೆದು ಹಾಕಲಾಗಿದೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News