ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆಪ್ಟಂಬರ್ 30 ರಂದು ತೀರ್ಪು

Update: 2020-09-16 16:41 GMT

ಹೊಸದಿಲ್ಲಿ, ಸೆ.16: 1992ರ ಬಾಬರಿ ಮಸೀದಿ ದ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟಂಬರ್ 30ರಂದು ತೀರ್ಪು ನೀಡುವುದಾಗಿ ಘೋಷಿಸಿದ್ದು ಬಿಜೆಪಿ ಹಿರಿಯ ಮುಖಂಡರಾದ ಎಲ್‌ಕೆ ಅಡ್ವಾಣಿ, ಉಮಾ ಭಾರತಿ ಸಹಿತ ಎಲ್ಲಾ 32 ಆರೋಪಿಗಳೂ ಅಂದು ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಸೂಚಿಸಿದೆ.

ದಶಕಗಳ ಹಿಂದಿನ ಈ ಪ್ರಕರಣದಲ್ಲಿ ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಬಿಜೆಪಿ ಮುಖಂಡರಾದ ಮುರಳಿ ಮನೋಹರ್ ಜೋಷಿ, ಉಮಾ ಭಾರತಿ, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್ ಸಹಿತ 32 ಆರೋಪಿಗಳಿದ್ದಾರೆ.

 ಸೆಪ್ಟಂಬರ್ 30ರೊಳಗೆ ಈ ಪ್ರಕರಣದ ವಿಚಾರಣೆ ಮುಗಿಸಿ ತೀರ್ಪು ನೀಡಬೇಕೆಂದು ಕಳೆದ ತಿಂಗಳು ಸುಪ್ರೀಂ ಕೋರ್ಟ್ ಗಡುವು ವಿಧಿಸಿತ್ತು. ನ್ಯಾಯಾಲಯದ ಕಲಾಪದಲ್ಲಿ 354 ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಒಟ್ಟು 49 ಆರೋಪಿಗಳಲ್ಲಿ 17 ಜನ ಮೃತಪಟ್ಟಿದ್ದಾರೆ. ಸೆಪ್ಟಂಬರ್ 1ರಂದು ದಂಡಪ್ರಕ್ರಿಯಾ ಸಂಹಿತೆ(ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್)ನ 313ನೇ ಸೆಕ್ಷನ್‌ನಡಿ 32 ಆರೋಪಿಗಳ ಹೇಳಿಕೆಯನ್ನು ದಾಖಲಿಸಿದ ಬಳಿಕ ಪ್ರತಿವಾದಿಗಳು ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಫಿರ್ಯಾದಿದಾರರು ಒಂದು ವಾರದ ಹಿಂದೆ ತಮ್ಮ ವಾದವನ್ನು ಸಲ್ಲಿಸಿದ್ದಾರೆ. ಈ ಮೇಲೆ ಉಲ್ಲೇಖಿಸಿದ ಸೆಕ್ಷನ್‌ನಡಿ ನ್ಯಾಯಾಧೀಶರು ನ್ಯಾಯಾಲಯದೆದುರು ಮಂಡಿಸಿದ ಸಾಕ್ಷಿಗಳ ಆಧಾರದಲ್ಲಿ ಆರೋಪಿಗಳನ್ನು ಪ್ರಶ್ನಿಸಬಹುದು ಮತ್ತು ತಮ್ಮ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಆರೋಪಿಗಳಿಗೆ ಅವಕಾಶ ನೀಡಲಾಗುತ್ತದೆ.

 1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬರಿ ಮಸೀದಿಯನ್ನು ಕರಸೇವಕರು ಧ್ವಂಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಸೀದಿ ಧ್ವಂಸಕ್ಕೆ ಪಿತೂರಿ ಹಾಗೂ ಗುಂಪಿನ ಪ್ರಚೋದನೆ ಎಂಬ ಎರಡು ಪ್ರಕರಣ ದಾಖಲಿಸಲಾಗಿತ್ತು. ಪಿತೂರಿ ಪ್ರಕರಣದ ವಿಚಾರಣೆ ಲಕ್ನೋ ನ್ಯಾಯಾಲಯದಲ್ಲಿ ಮತ್ತು ಕರಸೇವಕರನ್ನು ಪ್ರಚೋದಿಸಿದ ಪ್ರಕರಣದ ವಿಚಾರಣೆ ರಾಯ್‌ಬರೇಲಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. 2017ರ ಎಪ್ರಿಲ್ 19ರಂದು ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸಿದ ಸುಪ್ರೀಂಕೋರ್ಟ್, ಲಕ್ನೋದಲ್ಲಿ ವಿಶೇಷ ನ್ಯಾಯಾಲಯದ ಮೂಲಕ ವಿಚಾರಣೆ ಮುಂದುವರಿಸುವಂತೆ ಸೂಚಿಸಿತು. ಅಲ್ಲದೆ ಪ್ರಕರಣದಲ್ಲಿ 13 ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ, ಅವರ ವಿರುದ್ಧದ ಆರೋಪವನ್ನು ಮರುಸ್ಥಾಪಿಸಿತು. ರಾಯ್‌ಬರೇಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದ ಆರೋಪಿಗಳ ವಿರುದ್ಧ ಕ್ರಿಮಿನಲ್ ಒಳಸಂಚಿನ ಪ್ರಕರಣವನ್ನೂ ದಾಖಲಿಸಬೇಕೆಂದು ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News