ವಲಸಿಗ ಕಾರ್ಮಿಕರ ವಿಚಾರದಲ್ಲಿ ಸರಕಾರದಿಂದ ಮತ್ತೊಂದು ಸ್ಪಷ್ಟೀಕರಣ

Update: 2020-09-16 10:00 GMT

ಹೊಸದಿಲ್ಲಿ : ಲಾಕ್ ಡೌನ್ ಸಂದರ್ಭ ಮೃತಪಟ್ಟ ವಲಸಿಗ ಕಾರ್ಮಿಕರ ಕುರಿತು ತನ್ನ ಬಳಿ ದಾಖಲೆಯಿಲ್ಲ ಎಂದು ಸಂಸತ್ತಿನಲ್ಲಿ  ಹೇಳಿ ವಿಪಕ್ಷಗಳಿಂದ ತೀವ್ರ ತರಾಟೆಗೆ ಒಳಗಾಗಿರುವ  ಕೇಂದ್ರ ಸರಕಾರ  ಇಂದು ಈ ಕುರಿತು ಮತ್ತೆ ಪ್ರತಿಕ್ರಿಯಿಸಿ ಇಂತಹ ಮಾಹಿತಿ ಸಂಗ್ರಹಿಸುವ ಯಾವುದೇ ವ್ಯವಸ್ಥೆ ಜಿಲ್ಲೆಗಳಲ್ಲಿಲ್ಲ ಎಂದು ಹೇಳಿದೆ.

``ಯಾವುದೇ ಒಂದು ಜಿಲ್ಲೆಯಲ್ಲಿ ವಲಸಿಗ ಕಾರ್ಮಿಕರ ಸಾವು ಕುರಿತ ಮಾಹಿತಿ ಸಂಗ್ರಹಿಸುವ ಯಾವುದೇ ವ್ಯವಸ್ಥೆ ಮುನಿಸಿಪಲ್ ಮಟ್ಟದಲ್ಲಿಲ್ಲ. ಈ ಕುರಿತಂತೆ ಕಾರ್ಮಿಕ ಸಚಿವಾಲಯ ತಳೆದಿರುವ ನಿಲುವಿನ ಕುರಿತು ಪ್ರಶ್ನೆಗಳನ್ನೆತ್ತುವುದು ಸರಿಯಲ್ಲ,'' ಎಂದು ಸರಕಾರಿ ಮೂಲಗಳು ಹೇಳಿವೆ.

ವಲಸಿಗ ಕಾರ್ಮಿಕರ ಸಾವು ಕುರಿತಂತೆ ತನ್ನಲ್ಲಿ ದಾಖಲೆಗಳಿಲ್ಲ ಎಂದು ಸೋಮವಾರ ಹೇಳಿದ್ದ ಸರಕಾರ ಮಂಗಳವಾರ ಇನ್ನೊಂದು ಹೇಳಿಕೆ ನೀಡಿ ಲಾಕ್ ಡೌನ್ ಸಂದರ್ಭ ವಲಸಿಗ ಕಾರ್ಮಿಕರು ತಮ್ಮೂರುಗಳಿಗೆ ಹೇಗಾದರೂ ತಲುಪಬೇಕೆಂದು ಹೊರಡಲು `ನಕಲಿ ಸುದ್ದಿ' ಕಾರಣ ಎಂದೂ ಹೇಳಿತ್ತು.

ಇಂದು ಮತ್ತೆ ಈ ಕುರಿತು ಮಾತನಾಡಿದ ಸರಕಾರ, ಕೋವಿಡ್ ಸಂದರ್ಭ  ಕಾರ್ಮಿಕ ಕಲ್ಯಾಣ ಹಾಗೂ ಉದ್ಯೋಗ ಸೃಷ್ಟಿಗಾಗಿ ಅಭೂತಪೂರ್ವ ಪ್ರಯತ್ನಗಳನ್ನು ನಡೆಸಲಾಗಿದೆ ಎಂದು ಹೇಳಿದೆ. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವಾಲಯ ದೇಶದಲ್ಲಿ 2016ರಲ್ಲಿನ ಅಂಕಿಅಂಶಗಳಂತೆ ವಲಸಿಗ ಕಾರ್ಮಿಕರ ಸಂಖ್ಯೆ 10 ಕೋಟಿಯಷ್ಟಿರಬಹುದು ಎಂದು ಹೇಳಿತಲ್ಲದೆ ಲಾಕ್ ಡೌನ್ ವೇಳೆ ಸುಮಾರು ಒಂದು ಕೋಟಿ ವಲಸಿಗ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ಮರಳಿದ್ದಾರೆ ಎಂಬ ಮಾಹಿತಿಯನ್ನೂ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News