‘ಈ ದೇಶ ನನಗೂ ಸೇರಿದ್ದು ಎಂದು ಹೇಳಿದ್ದಕ್ಕಾಗಿ ನಾನು ಅಪಾಯಕಾರಿಯೇ?’

Update: 2020-09-16 14:14 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಜೆಎನ್ ಯುವಿನ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ರನ್ನು ಬಂಧಿಸಿ ಮೂರು ದಿನಗಳಾದ ಬಳಿಕ ಅವರು ಮೊದಲೇ ರೆಕಾರ್ಡ್ ಮಾಡಿದ್ದ ವಿಡಿಯೋವೊಂದು ಬಿಡುಗಡೆಯಾಗಿದೆ.

ಸಿಎಎ ಮತ್ತು ಎನ್ ಆರ್ ಸಿ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ದಿಲ್ಲಿ ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಉಮರ್ ಖಾಲಿದ್ ಆರೋಪಿಸಿದ್ದಾರೆ.

“ರಾಜಧಾನಿಯಲ್ಲಿ ಭಾರೀ ಮಟ್ಟದ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಗಲಭೆಕೋರರನ್ನು ದಿಲ್ಲಿ ಪೊಲೀಸರು ಬಂಧಿಸುತ್ತಿಲ್ಲ. ಆದರೆ ಸರಕಾರ ಮತ್ತು ಅದರ ನೀತಿಗಳನ್ನು ಟೀಕಿಸಿದವರ ಹಿಂದೆ ಬಿದ್ದಿದೆ. ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದವರನ್ನು ಯಾವುದೇ ಆಧಾರಗಳಲ್ಲಿ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ” ಎಂದವರು ಹೇಳಿದ್ದಾರೆ.

“ವಿಭಜನಕಾರಿ ರಾಜಕೀಯದ ವಿರುದ್ಧ ಮಾತನಾಡುವವರನ್ನು ಬೆದರಿಸಲಾಗುತ್ತಿದೆ. ಅವರನ್ನು ಮೌನವಾಗಿಸಲು ಜೈಲಿಗೆ ತಳ್ಳಲಾಗುತ್ತಿದೆ. ನಾನು ಯಾಕೆ ಅಪಾಯಕಾರಿ?, ನಿಮಗೆಷ್ಟು ಈ ದೇಶ ಸೇರಿದೆಯೋ ಅಷ್ಟೇ ನನಗೂ ಸೇರಿದ್ದು ಎಂದು ನಾನು ಹೇಳಿದ್ದಕ್ಕಾಗಿಯೇ?, ವಿವಿಧ ನಂಬಿಕೆಗಳ ಜನರಿರುವ, ವಿವಿಧ ಭಾಷೆಗಳನ್ನು ಮಾತನಾಡುವ ಸುಂದರ ದೇಶದಲ್ಲಿ ನಾವಿದ್ದೇವೆ. ಸಂವಿಧಾನ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು. ಆದರೆ ಇಂದು ಇದನ್ನು ಬದಲಿಸುವ, ನಮ್ಮನ್ನು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ” ಎಂದವರು ಹೇಳಿದರು.

ಅನ್ಯಾಯದ ವಿರುದ್ಧ ಧ್ವನಿಯೆತ್ತುವಂತೆ ಅವರು ಜನರಿಗೆ ಕರೆ ನೀಡಿದರು. “ಅವರು ನಮ್ಮನ್ನು ಹೆದರಿಸಲು ಯತ್ನಿಸುತ್ತಿದ್ದಾರೆ. ಜೈಲಿಗೆ ತಳ್ಳಿ ನಮ್ಮ ಸದ್ದಡಗಿಸಲು ಯತ್ನಿಸುತ್ತಿದ್ದಾರೆ. ನಿಮ್ಮನ್ನು ಸುಮ್ಮನಾಗಿಸಲು ಅವರು ಹೆದರಿಸುತ್ತಾರೆ. ನನ್ನ ಮನವಿ ಏನೆಂದರೆ ನೀವು ಹೆದರಬೇಡಿ. ಅನ್ಯಾಯದ ವಿರುದ್ಧ ಧ್ವನಿಯೆತ್ತಿ” ಎಂದು ಖಾಲಿದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News