ಕೋವಿಡ್ ಆಸ್ಪತ್ರೆಗಳ ಪರಿಶೀಲನೆಗೆ ಸಮಿತಿ ರಚನೆ

Update: 2020-09-20 13:46 GMT

ಹೊಸದಿಲ್ಲಿ, ಸೆ.20: ಸುಪ್ರೀಂಕೋರ್ಟ್‌ನ ಸೂಚನೆಯ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸರಕಾರಿ ಹಾಗೂ ಇತರ ಆಸ್ಪತ್ರೆಗಳ ಪರಿಶೀಲನೆ ಹಾಗೂ ಮೂಲಸೌಕರ್ಯಗಳ ಕೊರತೆಯ ಅಧ್ಯಯನ ನಡೆಸಲು ಕೇಂದ್ರ ಸರಕಾರ ಸಮಿತಿಯನ್ನು ರಚಿಸಿದೆ. ಆರೋಗ್ಯ ಇಲಾಖೆ ರಚಿಸಿರುವ ಈ ತಜ್ಞರ ಸಮಿತಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸರಕಾರಿ ಹಾಗೂ ಇತರ ಆಸ್ಪತ್ರೆಗಳ ಪರಿಶೀಲನೆ, ಮೇಲುಸ್ತುವಾರಿ ನಡೆಸಲಿದೆ ಹಾಗೂ ಮಾರ್ಗದರ್ಶನ ನೀಡಲಿದೆ ಎಂದು ಆರೋಗ್ಯ ಇಲಾಖೆಯ ಸಹಾಯಕ ಸಚಿವ ಅಶ್ವಿನಿ ಚೌಬೆ ರವಿವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಪ್ರಯೋಗಾಲಯದ ದೃಢೀಕರಣಕ್ಕೆ ಕಾಯದೆ ಶಂಕಿತ ಕೋವಿಡ್ ರೋಗಿಗಳ ಮೃತದೇಹವನ್ನು ತಕ್ಷಣ ಬಂಧುಗಳಿಗೆ ಹಸ್ತಾಂತರಿಸಬೇಕು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಸಂಸ್ಕಾರ ನಡೆಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್-19 ಪ್ರಕರಣಗಳನ್ನು ನಿರ್ವಹಿಸುತ್ತಿರುವ ಆಸ್ಪತ್ರೆಗಳ ಮೂಲಸೌಕರ್ಯದ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಕೊರೋನ ಸೋಂಕಿನ ಪ್ರಮಾಣದಲ್ಲಿ ಸಂಭವನೀಯ ಹೆಚ್ಚಳಕ್ಕೆ ಅನುಗುಣವಾಗಿ ಆರೋಗ್ಯ ಸೇವೆ ಸಲ್ಲಿಸಲು ರಾಜ್ಯಗಳು ಸಿದ್ಧವಾಗಿರಬೇಕು. ಕೋವಿಡ್-19 ಚಿಕಿತ್ಸಾ ಸೌಲಭ್ಯ ಕಲ್ಪಿಸಲು ಅಗತ್ಯವಿರುವ ಆರ್ಥಿಕ ಮತ್ತು ತಾಂತ್ರಿಕ ನೆರವನ್ನು ರಾಜ್ಯ ಸರಕಾರಕ್ಕೆ ಒದಗಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕೆಲವು ರಾಜ್ಯಗಳ ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನ ರೋಗಿಗಳ ಬಗ್ಗೆ ನಿಷ್ಕರುಣೆ ಹಾಗೂ ನಿಷ್ಟುರತೆಯಿಂದ ವರ್ತಿಸುತ್ತಿರುವ ಮತ್ತು ಕೊರೋನದಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ವಿಷಯದಲ್ಲಿ ಸುಪ್ರೀಂಕೋರ್ಟ್ ಎತ್ತಿರುವ ಆಕ್ಷೇಪದ ಬಗ್ಗೆ ಸರಕಾರದ ಪ್ರತಿಕ್ರಿಯೆಯನ್ನು ಸಚಿವರು ಇದೇ ಸಂದರ್ಭ ದಾಖಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News