"ಜನರಿಗೆ ಕೋವಿಡ್ ಲಸಿಕೆ ವಿತರಿಸಲು ಕೇಂದ್ರ ಸರಕಾರದ ಬಳಿ 80,000 ಕೋಟಿ ರೂ. ಇದೆಯೇ?"

Update: 2020-09-26 12:13 GMT

ಹೊಸದಿಲ್ಲಿ : ಮುಂದಿನ ಒಂದು ವರ್ಷ ಅವಧಿಯಲ್ಲಿ ಕೋವಿಡ್-19 ಲಸಿಕೆಗಳನ್ನು ಖರೀದಿಸಿ ವಿತರಿಸಲು ಕೇಂದ್ರ ಸರಕಾರದ ಬಳಿ ರೂ. 80,000 ಕೋಟಿ ಹಣವಿದೆಯೇ ಎಂದು ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅಡರ್ ಪೂನಾವಾಲ ಇಂದು ಪ್ರಶ್ನಿಸಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಭವಿಷ್ಯದಲ್ಲಿ ಎದುರಾಗುವ ಸವಾಲುಗಳತ್ತ ಬೆಳಕು ಚೆಲ್ಲಿದ್ದಾರೆ.

"ಒಂದು ಕ್ಷಿಪ್ರ ಪ್ರಶ್ನೆ. ಮುಂದಿನ ಒಂದು ವರ್ಷ ಅವಧಿಯಲ್ಲಿ ಸರಕಾರದ ಬಳಿ ರೂ. 80,000 ಕೋಟಿ ಲಭ್ಯವಿದೆಯೇ? ಏಕೆಂದರೆ ಭಾರತದಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ಒದಗಿಸಲು ಅದನ್ನು ಖರೀದಿಸಿ ವಿತರಿಸಲು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಅಷ್ಟು ಹಣದ ಅಗತ್ಯವಿದೆ,'' ಎಂದು ಪೂನಾವಾಲ ಟ್ವೀಟ್ ಮಾಡಿ ಪಿಎಂಒ ಅನ್ನೂ ಟ್ಯಾಗ್ ಮಾಡಿದ್ದಾರೆ.

ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯೆಂದು ಪರಿಗಣಿತವಾಗಿರುವ ಪುಣೆ ಮೂಲದ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಈಗಾಗಲೇ  ಅಸ್ಟ್ರಾಝೆನೆಕಾ-ಆಕ್ಸ್ ಫರ್ಡ್ ವಿವಿ ಸಹಿತ ಹಲವು ಸಂಸ್ಥೆಗಳು ಸಿದ್ಧಪಡಿಸುತ್ತಿರುವ ಕೋವಿಡ್ ಲಸಿಕೆಗಳ ಕುರಿತು ಹೆಚ್ಚಿನ ಸಂಶೋಧನೆ ಜತೆಗೆ ತಾನು ಕೂಡ ತನ್ನದೇ ಸ್ವಂತ ಲಸಿಕೆಯೊಂದನ್ನೂ ಅಭಿವೃದ್ಧಿ ಪಡಿಸುತ್ತಿದೆ.

ಕೋವಿಡ್ ಲಸಿಕೆ ಅಭಿವೃದ್ಧಿ ಯೋಜನೆಗೆ ಬೆಂಬಲವಾಗಿ ಸರಕಾರ ಪಿಎಂ ಕೇರ್ಸ್ ಫಂಡ್‍ನಿಂದ ಮೇ ತಿಂಗಳಲ್ಲಿ ರೂ. 100 ಕೋಟಿ ಒದಗಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News