ರೈತರ ತೀವ್ರ ಪ್ರತಿಭಟನೆಯ ನಡುವೆ ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ತಕ್ಷಣ ಅಕ್ಕಿ ಸಂಗ್ರಹಣೆಗೆ ಕೇಂದ್ರ ಆದೇಶ

Update: 2020-09-26 15:41 GMT

ಹೊಸದಿಲ್ಲಿ, ಸೆ.26: ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ರೈತರ ತೀವ್ರ ಪ್ರತಿಭಟನೆಯ ಮಧ್ಯೆಯೇ, ಪಂಜಾಬ್ ಮತ್ತು ಹರ್ಯಾಣದಲ್ಲಿ ಖಾರಿಫ್ (ಮುಂಗಾರು) ಭತ್ತ, ಅಕ್ಕಿಯ ಸಂಗ್ರಹಣೆ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ಕೇಂದ್ರ ಸರಕಾರ ಶನಿವಾರ ಆದೇಶಿಸಿದೆ. ಮುಂಗಾರು ಬೆಳೆಯ ಭತ್ತ, ಅಕ್ಕಿಯನ್ನು ಮಾರುಕಟ್ಟೆಗೆ ತಲುಪಿಸುವ ಕಾರ್ಯ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಅಕ್ಟೋಬರ್ ಪ್ರಥಮ ವಾರದಿಂದ ಆರಂಭವಾಗುತ್ತದೆ. ಆದರೆ ಪಂಜಾಬ್ ಮತ್ತು ಹರ್ಯಾಣದಲ್ಲಿ ಶನಿವಾರದಿಂದಲೇ ಸಂಗ್ರಹ ಕಾರ್ಯ ಆರಂಭಿಸುವಂತೆ ಕೇಂದ್ರ ಸರಕಾರ ಸೂಚಿಸಿದೆ. 2020-21ರ ಮುಂಗಾರು ಅವಧಿಯ ಅಕ್ಕಿ/ಭತ್ತ ಮಾರಾಟ ಮತ್ತು ಸಂಗ್ರಹಣೆ ಕಾರ್ಯ ಅಕ್ಟೋಬರ್ 1ರಿಂದ ಆರಂಭಿಸುವಂತೆ ಈಗಾಗಲೇ ನಿಗದಿಗೊಳಿಸಲಾಗಿದ್ದು ರಾಜ್ಯದ ಸಂಗ್ರಹಣ ಏಜೆನ್ಸಿಗಳು ಮತ್ತು ಭಾರತೀಯ ಆಹಾರ ನಿಗಮ(ಎಫ್‌ಸಿಐ)ಗಳು ಸಂಗ್ರಹಣಾ ಕಾರ್ಯವನ್ನು ಸರಾಗವಾಗಿ ನಡೆಸಲು ಸರ್ವ ಸನ್ನದ್ಧವಾಗಿವೆ. ಆದರೆ ಹರ್ಯಾಣ ಮತ್ತು ಪಂಜಾಬ್‌ನ ಮಂಡಿ(ಮಾರುಕಟ್ಟೆ)ಗಳಲ್ಲಿ ಅವಧಿಗೆ ಮುನ್ನವೇ ಭತ್ತ ಆಗಮಿಸಿದ್ದರಿಂದ ಈ ಎರಡು ರಾಜ್ಯಗಳಲ್ಲಿ ಸೆಪ್ಟಂಬರ್ 26ರಿಂದಲೇ ಸಂಗ್ರಹಣೆ ಕಾರ್ಯ ಆರಂಭಿಸುವ ಮೂಲಕ ರೈತರು ತಮ್ಮ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಅನುಕೂಲ ಕಲ್ಪಿಸಲಾಗಿದೆ ಎಂದು ಕೇಂದ್ರದ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಹೇಳಿಕೆ ತಿಳಿಸಿದೆ. 

ಕೇಂದ್ರ ಸರಕಾರದ ಮೂರು ಕೃಷಿ ಮಸೂದೆಯನ್ನು ವಿರೋಧಿಸಿ ಪಂಜಾಬ್ ಮತ್ತು ಹರ್ಯಾಣದಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿರುವ ಸಂದರ್ಭದಲ್ಲೇ ಕೇಂದ್ರ ಸರಕಾರ ಈ ಸೂಚನೆ ನೀಡಿದೆ. ಮೂರು ಮಸೂದೆಗೂ ರೈತರ ವಿರೋಧವಿದ್ದರೂ, ಅವರ ಮುಖ್ಯ ಆಕ್ಷೇಪವಿರುವುದು ಮೊದಲನೆ ಮಸೂದೆಯ ಬಗ್ಗೆ. ರೈತರ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆಯು ಈಗ ಇರುವ ಎಪಿಎಂಸಿಯ ಹೊರಗಡೆ ವ್ಯಾಪಾರಕ್ಕೆ ಸ್ಥಳಾವಕಾಶ ಕಲ್ಪಿಸುತ್ತದೆ. ಇದು ಎಪಿಎಂಸಿ ಅಥವಾ ಮಂಡಿ ವ್ಯವಸ್ಥೆಯನ್ನು ಕೊನೆಗೊಳಿಸಿ ಬಳಿಕ ಕನಿಷ್ಠ ಬೆಂಬಲ ಬೆಲೆ ಪದ್ಧತಿಗೂ ಇತಿಶ್ರೀ ಹಾಡುತ್ತದೆ ಎಂಬುದು ರೈತರ ವಾದವಾಗಿದೆ. ಆದರೆ ಕೃಷಿ ಮಸೂದೆಗೂ ಕನಿಷ್ಠ ಬೆಂಬಲ ಬೆಲೆಗೂ ಯಾವುದೇ ಸಂಬಂಧವಿಲ್ಲ. ಕೃಷಿ ಮಸೂದೆಯು ಎಪಿಎಂಸಿ ಆವರಣದಿಂದ ಹೊರಗೆ ನಡೆಯುವ ವ್ಯಾಪಾರಕ್ಕೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಕಳೆದ ಮುಂಗಾರು ಅವಧಿಯಲ್ಲಿ 23 ರಾಜ್ಯಗಳಿಂದ 512 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಸಂಗ್ರಹಿಸಲಾಗಿದೆ. ಇದರಲ್ಲಿ ಪಂಜಾಬ್‌ನಿಂದ 109 ಲಕ್ಷ ಮೆಟ್ರಿಕ್ ಟನ್, ತೆಲಂಗಾಣದಿಂದ 73 ಲಕ್ಷ ಮೆಟ್ರಿಕ್ ಟನ್, ಆಂಧ್ರಪ್ರದೇಶದಿಂದ 54 ಲಕ್ಷ ಮೆಟ್ರಿಕ್ ಟನ್, ಛತ್ತೀಸ್‌ಗಢದಿಂದ 49 ಲಕ್ಷ ಮೆಟ್ರಿಕ್ ಟನ್, ಒಡಿಶಾ 47 ಲಕ್ಷ ಮೆಟ್ರಿಕ್ ಟನ್ ಮತ್ತು ಹರ್ಯಾಣದಿಂದ 43 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News