ಆತ್ಮನಿರ್ಭರ ಭಾರತದಲ್ಲಿ ರೈತರು ಪ್ರಮುಖ ಪಾತ್ರವಹಿಸುತ್ತಿದ್ದಾರೆ: ಪ್ರಧಾನಿ ಮೋದಿ

Update: 2020-09-27 16:36 GMT

ಹೊಸದಿಲ್ಲಿ, ಸೆ.27: ದೇಶದ ರೈತರು ಈಗ ಇನ್ನಷ್ಟು ಸಬಲರಾಗಿದ್ದು ತಮ್ಮ ಕೃಷಿ ಉತ್ಪನ್ನಗಳನ್ನು ಯಾರಿಗೆ , ಯಾವ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂಬುದನ್ನು ಅವರೇ ನಿರ್ಧರಿಸುವ ವ್ಯವಸ್ಥೆ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

‘ಮನ್‌ ಕಿ ಬಾತ್’ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಕೃಷಿ ಮಸೂದೆಯನ್ನು ಸಮರ್ಥಿಸಿಕೊಂಡ ಅವರು, ದೇಶದ ಕೃಷಿ ವಲಯವನ್ನು ಸಶಕ್ತಗೊಳಿಸುತ್ತಿರುವ ರೈತರು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಆರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಹಣ್ಣು, ತರಕಾರಿಗಳನ್ನು ಎಪಿಎಂಸಿ ಕಾಯ್ದೆಯ ವ್ಯಾಪ್ತಿಯಿಂದ ಹೊರತಂದ ಬಳಿಕ ಹಲವು ರೈತರಿಗೆ ಅನುಕೂಲವಾಗಿದೆ. ಪುಣೆ ಮತ್ತು ಮುಂಬೈಯ ರೈತರು ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಇದು ಅತ್ಯಂತ ಸರಳ ವ್ಯವಸ್ಥೆಯಾಗಿದೆ . ಕೊರೋನ ಸೋಂಕಿನ ಸಂದರ್ಭದಲ್ಲೂ ದೇಶದ ಕೃಷಿ ವಲಯ ಸಕ್ರಿಯವಾಗಿದ್ದು ತನ್ನ ತಾಕತ್ತನ್ನು ಪ್ರದರ್ಶಿಸಿದೆ. ಸ್ವಾವಲಂಬಿ ಭಾರತ ನಿರ್ಮಾಣದಲ್ಲಿ ರೈತರ ಪಾತ್ರ ಮಹತ್ತರವಾಗಿದ್ದು ಕೃಷಿಯಲ್ಲಿ ತಂತ್ರಜ್ಞಾನದ ಅಧಿಕ ಬಳಕೆಯಿಂದ ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಅನುಕೂಲವಾಗುತ್ತದೆ. ಕೇಂದ್ರ ಸರಕಾರದ ಹೊಸ ಕೃಷಿ ಮಸೂದೆಯಿಂದ ರೈತರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಇನ್ನು ಮುಂದೆ ರೈತರು ತಮ್ಮ ಉತ್ಪನ್ನಗಳನ್ನು ಕೇವಲ ಸರಕಾರಕ್ಕೆ ಮಾತ್ರವಲ್ಲ, ಯಾರಿಗೆ ಬೇಕಾದರೂ ಮಾರಬಹುದು. ಈ ಮಸೂದೆ ರೈತರ ಶಕ್ತಿಯಾಗಿದೆ ಮತ್ತು ಅವರ ಅಭಿವೃದ್ಧಿಗೆ ಆಧಾರವಾಗಿದೆ ಎಂದು ಹೇಳಿದರು.

ಅರ್ಥವ್ಯವಸ್ಥೆಯ ಕುರಿತ ಮಹಾತ್ಮಾ ಗಾಂಧೀಜಿಯವರ ಚಿಂತನೆಯನ್ನು ಪಾಲಿಸಿದ್ದರೆ , ದೇಶ ಈಗಾಗಲೇ ಸ್ವಾವಲಂಬಿ ರಾಷ್ಟ್ರವಾಗುತ್ತಿತ್ತು ಎಂದು ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಟೀಕಿಸಿದರು. ನಮ್ಮ ಎಲ್ಲಾ ಕ್ರಿಯೆಗಳೂ ಬಡವರ ಮತ್ತು ನೊಂದವರ ಹಿತಚಿಂತನೆಯ ಉದ್ದೇಶ ಹೊಂದಿರಬೇಕು ಎಂಬುದನ್ನು ಗೌರವಾನ್ವಿತ ಬಾಪು ಅವರ ಜೀವನವು ನಮಗೆ ನೆನಪಿಸುತ್ತದೆ ಎಂದು ಮೋದಿ ಹೇಳಿದರು. ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರ ಆದರ್ಶವನ್ನು ಇದೇ ಸಂದರ್ಭ ಅವರು ಸ್ಮರಿಸಿಕೊಂಡರು. ಸೆಪ್ಟಂಬರ್ 29ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್‌ಸಿಂಗ್ ಜನ್ಮದಿನವಾಗಿದ್ದು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಿಂಗ್ ತೋರಿದ್ದ ಶೌರ್ಯ, ಕೆಚ್ಚು ಮತ್ತು ಛಲವನ್ನು ನಾಲ್ಕು ವರ್ಷದ ಹಿಂದೆ ನಮ್ಮ ಶೂರ ಯೋಧರು ಸರ್ಜಿಕಲ್ ದಾಳಿಯ ಸಂದರ್ಭ ಪುನರಾವರ್ತಿಸಿದ್ದಾರೆ ಎಂದು ಮೋದಿ ಹೇಳಿದರು.

ಕೊರೋನ ಸೋಂಕಿನ ವಿರುದ್ಧ ಗರಿಷ್ಟ ಎಚ್ಚರಿಕೆಯಿಂದ ಇರುವಂತೆ ಪುನರುಚ್ಚರಿಸಿದ ಮೋದಿ, ಮಾಸ್ಕ್ ಧರಿಸುವುದು ಮತ್ತು ಸುರಕ್ಷಿತ ಅಂತರ ಪಾಲಿಸುವುದು ಸೋಂಕಿನ ವಿರುದ್ಧದ ಹೋರಾಟದಲ್ಲಿ ನಮಗಿರುವ ಆಯುಧಗಳಾಗಿವೆ. ಲಸಿಕೆ ಲಭ್ಯವಾಗುವವರೆಗೂ ಈ ಆಯುಧ ಮತ್ತು ನಿಯಮದ ಬಗ್ಗೆ ಅಸಡ್ಡೆ ಸಲ್ಲದು ಎಂದರು. ಈ ಮಧ್ಯೆ, ಪ್ರಧಾನಿ ಮೋದಿಯ ಬಗ್ಗೆ ಟೀಕಾ ಪ್ರಹಾರ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೊರೋನ ಸೋಂಕಿನ ವಿರುದ್ಧದ ಕಾರ್ಯತಂತ್ರದ ಬಗ್ಗೆ ಮನ್‌ಕಿ ಬಾತ್ ವಿವರಿಸುತ್ತದೆ ಎಂಬ ನಿರೀಕ್ಷೆ ಮತ್ತೆ ಹುಸಿಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News