2014ರಿಂದ ದೇಶೀಯ ನಿರ್ಮಿತ ಕಳಪೆ ಶಸ್ತ್ರಾಸ್ತ್ರಗಳಿಂದ 960 ಕೋಟಿ ರೂ. ನಷ್ಟ

Update: 2020-09-30 09:18 GMT

ಹೊಸದಿಲ್ಲಿ:  ದೇಶದಲ್ಲಿ ಶಸ್ತ್ರಾಸ್ತ್ರ ಫ್ಯಾಕ್ಟರಿಗಳು 2014ರಿಂದ ತಯಾರಿಸುತ್ತಿರುವ ಕಳಪೆ ಗುಣಮಟ್ಟದ  ಸಾಮಗ್ರಿಗಳಿಂದಾಗಿ   ಬೊಕ್ಕಸಕ್ಕೆ ಸುಮಾರು 960 ಕೋಟಿ ರೂ. ನಷ್ಟವುಂಟಾಗಿದೆ. ಆ ಹಣದಿಂದ  ಹೌವಿಟ್ಝರ್ ನಂತಹ ಮಧ್ಯಮ ಗಾತ್ರದ 155 ಎಂಎಂ  ಸಾಮರ್ಥ್ಯದ 100 ಫಿರಂಗಿ ಬಂದೂಕುಗಳನ್ನು ಖರೀದಿಸಬಹುದಾಗಿತ್ತು ಎಂದು  ಭಾರತೀಯ ಸೇನೆಯ ಅಧಿಕೃತ ಶಿಫಾರಸು ವರದಿಯಲ್ಲಿ ತಿಳಿಸಲಾಗಿದೆ. ಈ ವರದಿಯು ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ರಕ್ಷಣಾ ಸಚಿವಾಲಯದಲ್ಲಿ ಚರ್ಚೆಯಾಗುತ್ತಿದೆ ಎಂದು indianexpress.com ವರದಿ ಮಾಡಿದೆ.

ಸೇನಾ ವರದಿಯಲ್ಲಿ ಉಲ್ಲೇಖಿಸಲಾದ 960 ಕೋಟಿ ರೂ. ಮೊತ್ತದ ಕುರಿತಂತೆ ಇರುವ ಇನ್ನಷ್ಟು ಮಾಹಿತಿಯಲ್ಲಿ ಎಪ್ರಿಲ್ 2014 ಹಾಗೂ ಎಪ್ರಿಲ್ 2019ರ ನಡುವೆ ತಮ್ಮ ಬಾಳ್ವಿಕೆ ಅವಧಿ ಮುಕ್ತಾಯಗೊಳ್ಳುವ ಮುನ್ನವೇ  658.58 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತಗಳನ್ನು ವಿಲೇವಾರಿಗೊಳಿಸಲಾಗಿದ್ದರೆ,  ಪುಲ್ಗಾಂವ್‍ ನಲ್ಲಿನ ಕೇಂದ್ರೀಯ ಶಸ್ತ್ರಾಸ್ತ್ರ ಡಿಪೋದಲ್ಲಿ ಮೇ 2016ರಲ್ಲಿ ನಡೆದ ಆಕಸ್ಮಿಕ ಸ್ಫೋಟದಲ್ಲಿ  303.23 ಕೋಟಿ ರೂ. ಮೌಲ್ಯದ ಸಲಕರಣೆಗಳು  ನಾಶವಾಗಿದ್ದವು ಎಂದು ವರದಿ ತಿಳಿಸಿದೆ.

ಕಳಪೆ ಗುಣಮಟ್ಟದ ಶಸ್ತ್ರಾಸ್ತ್ರಗಳಿಂದ 2014 ಹಾಗೂ 2019 ನಡುವೆ ನಡೆದ 402 ಅವಘಡಗಳಲ್ಲಿ 27 ಜವಾನರು ಮೃತಪಟ್ಟು, 146 ಮಂದಿಗೆ ಗಾಯಗಳಾಗಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

ತನ್ನ ನೂತನ ವರದಿಯಲ್ಲಿ ಭಾರತೀಯ ಸೇನೆಯು  ಶಸ್ತ್ರಾಸ್ತ್ರ ಫ್ಯಾಕ್ಟರಿ ಮಂಡಳಿಯನ್ನು ಕಾರ್ಪೊರೆಟೀಕರಣಗೊಳಿಸುವಂತೆ ಶಿಫಾರಸು ಮಾಡಿದೆ. ಈ ಪ್ರಕ್ರಿಯೆಯನ್ನು ನೋಡಿಕೊಳ್ಳಲು ಸರಕಾರವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ  ಉನ್ನತಾಧಿಕಾರ ಹೊಂದಿದ ಸಚಿವರ ತಂಡವನ್ನೂ ಸೆಪ್ಟೆಂಬರ್ 11ರಂದು ರಚಿಸಿದೆ. ಮಂಡಳಿಯನ್ನು ಸರಕಾರಿ ಒಡೆತನದ ಒಂದು ಸಂಸ್ಥೆಯಾಗಿ ಅಥವಾ  ಸರಕಾರಿ ಒಡೆತನದ ಹಲವಾರು ಕಾರ್ಪೊರೇಟ್ ಸಂಸ್ಥೆಗಳಾಗಿ ಪರಿವರ್ತಿಸಬೇಕೇ ಎಂಬುದನ್ನು ಈ ತಂಡ ನಿರ್ಧರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News