ಲಾಕ್‌ಡೌನ್‌ನಿಂದಾಗಿ ರದ್ದಾಗಿದ್ದ ವಿಮಾನಯಾನ ಟಿಕೆಟ್‌ಗಳ ಶುಲ್ಕ ಪೂರ್ಣ ಮರುಪಾವತಿಗೆ ಸುಪ್ರೀಂ ಕೋರ್ಟ್ ಆದೇಶ

Update: 2020-10-01 14:24 GMT

ಹೊಸದಿಲ್ಲಿ, ಅ.1: ಕೊರೋನ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಬುಕ್ ಮಾಡಿ ಬಳಿಕ ರದ್ದುಗೊಂಡಿದ್ದ ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನ ಟಿಕೆಟ್‌ಗಳಿಗೆ ಯಾವುದೇ ರದ್ದತಿ ಶುಲ್ಕವನ್ನು ವಿಧಿಸದೆ ಸಂಪೂರ್ಣ ಹಣವನ್ನು ಮರುಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಗುರುವಾರ ವಿಮಾನಯಾನ ಸಂಸ್ಥೆಗಳಿಗೆ ಆದೇಶಿಸಿದೆ.

ನ್ಯಾ.ಅಶೋಕ ಭೂಷಣ ನೇತೃತ್ವದ ಪೀಠವು ನಾಗರಿಕ ವಾಯುಯಾನ ಮಹಾ ನಿರ್ದೇಶಕರ ಶಿಫಾರಸನ್ನು ಪರಿಗಣನೆಗೆ ತೆಗೆದುಕೊಂಡು ಈ ಆದೇಶವನ್ನು ಹೊರಡಿಸಿದೆ. ಪ್ರಯಾಣಿಕರು ಭವಿಷ್ಯದಲ್ಲಿ ಮಾಡುವ ಟಿಕೆಟ್ ಬುಕಿಂಗ್‌ಗಳಿಗೆ ಬಳಸಬಹುದಾದ ಕ್ರೆಡಿಟ್ ನೋಟ್ ನೀಡುವ ಕ್ರೆಡಿಟ್ ಶೆಲ್ ಯೋಜನೆಗೂ ನ್ಯಾಯಾಲಯವು ಅಸ್ತು ಎಂದಿದ್ದು,ಈ ಯೋಜನೆ ಮುಂದಿನ ವರ್ಷದ ಮಾ.31ರವರೆಗೆ ಸಿಂಧುವಾಗಿರುತ್ತದೆ.

ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್‌ಗಳನ್ನು ಖರೀದಿಸಿದ್ದವರು ಆಯಾ ಏಜೆಂಟ್‌ಗಳ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾದ ಬಳಿಕ ತಮ್ಮ ಟಿಕೆಟ್ ಶುಲ್ಕವನ್ನು ವಾಪಸ್ ಪಡೆಯಬಹುದು ಎಂದು ನ್ಯಾಯಾಲಯವು ತಿಳಿಸಿದೆ.

ಮಾ.24ರವರೆಗೆ ಟಿಕೆಟ್‌ಗಳನ್ನು ಬುಕ್ ಮಾಡಿದ್ದ ಪ್ರಯಾಣಿಕರಿಗೆ ಹಣವನ್ನು ಮರುಪಾವತಿಸಲು ವಿಮಾನಯಾನ ಸಂಸ್ಥೆಗಳಿಗೆ ಮುಂದಿನ ಮಾ.31ರವರೆಗೆ ಸಮಯಾವಕಾಶವನ್ನು ನೀಡಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ವಿಮಾನಯಾನ ಟಿಕೆಟ್‌ಗಳನ್ನು ಮಾರಾಟ ಮಾಡಬಾರದಿತ್ತು,ಹೀಗಾಗಿ ಮಾ.25ರಿಂದ ಮೇ 24ರ ನಡುವಿನ ಅವಧಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದ್ದ ಪ್ರಯಾಣಿಕರಿಂದ ಸಂಗ್ರಹಿಸಿದ್ದ ಹಣವನ್ನು ಟಿಕೆಟ್ ರದ್ದುಗೊಂಡ ದಿನಾಂಕದಿಂದ ಮೂರು ವಾರಗಳಲ್ಲಿ ಮರುಪಾವತಿಸಬೇಕು ಎಂದು ಪೀಠವು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News