ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ದಿಲ್ಲಿ ಸಿಎಂ ಕೇಜ್ರಿವಾಲ್ ಸಾಥ್
ಹೊಸದಿಲ್ಲಿ, ಅ.2: ಹತ್ರಸ್ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಸಂತ್ರಸ್ತೆಗೆ ನ್ಯಾಯದ ಬೇಡಿಕೆ ಮುಂದಿಟ್ಟುಕೊಂಡು ಸಿವಿಲ್ ಸೊಸೈಟಿ ಕಾರ್ಯಕರ್ತರುಗಳು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಸದಸ್ಯರುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಭಟನೆಗೆ ಸಾಥ್ ನೀಡಿದರು.
ಪ್ರತಿಭಟನೆಯನ್ನು ಇಂಡಿಯಾ ಗೇಟ್ ಬಳಿ ಆಯೋಜಿಸಲು ನಿರ್ಧರಿಸಲಾಗಿತ್ತು. ರಾಜಪಥ ಪ್ರದೇಶದಲ್ಲಿ ಸೆಕ್ಷನ್ ಜಾರಿಗೊಳಿಸಿದ್ದ ಕಾರಣ ಪ್ರತಿಭಟನೆಯನ್ನು ಜಂತರ್ ಮಂತರ್‌ಗೆ ಸ್ಥಳಾಂತರಿಸಲಾಗಿತ್ತು.
‘‘ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವುದು ಗುಂಡಾರಾಜ್ಯ ಪೊಲೀಸರು ಇಡೀ ಹಳ್ಳಿಯನ್ನು ಸುತ್ತುವರಿದಿದ್ದು, ವಿರೋಧ ಪಕ್ಷಗಳ ನಾಯಕರುಗಳು ಹಾಗೂ ಮಾಧ್ಯಮಮಂದಿಗೆ ಅಲ್ಲಿಗೆ ಪ್ರವೇಶಿಸಲು ಅವಕಾಶ ನೀಡುತ್ತಿಲ್ಲ. ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರುಗಳ ಮೊಬೈಲ್ ಫೋನ್‌ಗಳನ್ನು ಪೊಲೀಸರು ಕಿತ್ತುಕೊಂಡಿದ್ದಾರೆ’’ ಎಂದು ಸಾಮಾಜಿಕ ಹೋರಾಟಗಾರ ಹಾಗೂ ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.