ಕೇಂದ್ರದ ಯೋಜನೆ ಹಲವು ಸಮಸ್ಯೆ ಬಗೆಹರಿಸಿಲ್ಲ: ಚಕ್ರಬಡ್ಡಿ ಮನ್ನಾ ಕುರಿತು ಸುಪ್ರೀಂಕೋರ್ಟ್

Update: 2020-10-05 07:54 GMT

ಹೊಸದಿಲ್ಲಿ, ಅ.5: ಕೊರೊನ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ 2 ಕೋಟಿ ರೂ. ವರೆಗಿನ ಸಾಲ ಮರು ಪಾವತಿಯ ಮೇಲಿನ ಚಕ್ರಬಡ್ಡಿ ಮನ್ನಾ ಮಾಡುವ ಕುರಿತು ಕೇಂದ್ರ ಸರಕಾರ ಸಲ್ಲಿಸಿರುವ ಅಫಿಡವಿಟ್ ತೃಪ್ತಿದಾಯಕವಾಗಿಲ್ಲ. ಇನ್ನೊಂದು ವಾರದಲ್ಲಿ ಹೊಸ ಅಫಿಡವಿಟ್‌ನ್ನು ಸಲ್ಲಿಸಬೇಕು. ಕೇಂದ್ರದ ಯೋಜನೆಯಲ್ಲಿ ಹಲವಾರು ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ಮುಂದೂಡಿದೆ.

ಅರ್ಜಿದಾರರು ಎತ್ತಿರುವ ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರದ ಅಫಿಡವಿಟ್ ವಿಫಲವಾಗಿದೆ ಎಂದಿರುವ ಸುಪ್ರೀಂಕೋರ್ಟ್ ಪರಿಷ್ಕೃತ ಫೈಲಿಂಗ್ ಮಾಡಲು ಸರಕಾರಕ್ಕೆ ಇನ್ನೂ ಒಂದು ವಾರ ಕಾಲಾವಕಾಶ ನೀಡಿರುವುದಾಗಿ ನ್ಯಾಯಪೀಠ ಹೇಳಿದೆ.

 ಕೊರೋನ ಸಮಯದಲ್ಲಿ ಸಣ್ಣ ಸಾಲಗಾರರಿಗೆ ಸಹಾಯ ಮಾಡಲು ಸಾಲದ ಖಾತೆಗಳ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿ ಮನ್ನಾ ಕುರಿತ ಅರ್ಜಿಯ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಸಾಲಗಾರರಿಗೆ ಸಹಾಯ ಮಾಡಲು ಸಣ್ಣ ಉದ್ಯಮಗಳು, ಶಿಕ್ಷಣ, ವಸತಿ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿಗಳಿಗೆ ಸಂಬಂಧಿಸಿದ ಕೆಲವು ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾಮಾಡುವುದಾಗಿ ಕೇಂದ್ರ ಸರಕಾರವು ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.

 ಕೇಂದ್ರದ ನಿರ್ಧಾರಗಳನ್ನು ಜಾರಿಗೊಳಿಸುವ ಕುರಿತು ಸರಕಾರ ಅಥವಾ ಆರ್‌ಬಿಐ ಯಾವುದೇ ಪರಿಣಾಮಕಾರಿ ಆದೇಶಗಳು ಅಥವಾ ಸುತ್ತೋಲೆಗಳನ್ನು ಹೊರಡಿಸಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ರಿಯಲ್ ಎಸ್ಟೇಟ್ ಡೆವಲಪರ್‌ಗಳ ಹಾಗೂ ವಿದ್ಯುತ್ ಉತ್ಪಾದಕರ ಕಳವಳವನ್ನು ತನ್ನ ಹೊಸ ಫೈಲಿಂಗ್‌ನಲ್ಲಿ ಗಣನೆಗೆ ತೆಗೆದುಕೊಳ್ಳುವಂತೆ ಸರಕಾರವನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News