×
Ad

ದ್ವೇಷದ ಪರಂಪರೆಯನ್ನು ನಮ್ಮ ಮಕ್ಕಳು ಅನುಸರಿಸುವುದು ನನಗಿಷ್ಟವಿಲ್ಲ

Update: 2020-10-13 20:13 IST
ಫೈಲ್ ಚಿತ್ರ

ಹೊಸದಿಲ್ಲಿ,ಅ.13: ತನ್ನ ಮಕ್ಕಳು ದ್ವೇಷದ ಬುನಾದಿಯ ಮೇಲೆ ನಿರ್ಮಿತ ಭಾರತದ ಪರಂಪರೆಯನ್ನು ಮೈಗೂಡಿಸಿಕೊಳ್ಳುವುದನ್ನು ತಾನು ಬಯಸುವುದಿಲ್ಲವಾದ್ದರಿಂದ ವಿಷ ಕಾರುವ ಮೂಲಕ ಸಮಾಜದ ನೆಮ್ಮದಿಯನ್ನು ಕದಡುವ ಟಿವಿ ವಾಹಿನಿಗಳಿಂದ ಜಾಹೀರಾತುಗಳನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ನೇರ ಮತ್ತು ನಿರ್ಭಿಡೆಯ ಮಾತುಗಳಿಗೆ ಹೆಸರಾಗಿರುವ ಖ್ಯಾತ ಕೈಗಾರಿಕೋದ್ಯಮಿ ,ಬಜಾಜ್ ಆಟೋದ ಆಡಳಿತ ನಿರ್ದೇಶಕ ರಾಹುಲ್ ಬಜಾಜ್ ಹೇಳಿದ್ದಾರೆ.

 ಇತ್ತೀಚಿನ ನಕಲಿ ಟಿಆರ್‌ಪಿ ಹಗರಣ ಮತ್ತು ಹೆಚ್ಚುತ್ತಿರುವ ಮಾಧ್ಯಮ ವಿಷತ್ವದ ಕುರಿತು ‘ಗಲ್ಫ್ ನ್ಯೂಸ್‌ಗೆ’ ನೀಡಿರುವ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಬಜಾಜ್, ‘ನನ್ನ ಮತ್ತು ನನ್ನ ಸೋದರನ ಮಕ್ಕಳು ಇಂತಹ ದ್ವೇಷವು ವೃಣಗಟ್ಟುತ್ತಿರುವ ಭಾರತ ಮತ್ತು ಸಮಾಜವನ್ನು ಬಳುವಳಿಯಾಗಿ ಪಡೆಯಲು ಸಾಧ್ಯವಿಲ್ಲ, ಹೀಗಾಗಿ ಜಾಹೀರಾತುಗಳ ನಿಷೇಧ ನನ್ನ ಮಟ್ಟಿಗೆ ಬುದ್ಧಿವಂತಿಕೆಯ ನಿರ್ಧಾರವಾಗಿದೆ. ಅದು ಸರಳ ಆಯ್ಕೆಯಾಗಿತ್ತು ಮತ್ತು ಅದನ್ನೇ ನಾನು ಆಯ್ದುಕೊಂಡಿದ್ದೇನೆ ’ ಎಂದು ಹೇಳಿದರು.

  ನಿಮ್ಮ ಈ ನಡೆಗೆ ಪ್ರೇರಣೆಯೇನು ಎಂಬ ಪ್ರಶ್ನೆಗೆ ಬಜಾಜ್, ‘ಕ್ರಿಕೆಟಿಗ ಎಂ.ಎಸ್.ಧೋನಿಯ ಪುತ್ರಿಗೆ ಅತ್ಯಾಚಾರದ ಬೆದರಿಕೆ ಮತ್ತು ಅಮಿತಾಬ್ ಬಚ್ಚನ್ ಅವರು ಕೊರೋನ ವೈರಸ್ ಸೋಂಕಿಗೆ ಗುರಿಯಾಗಿದ್ದಾಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾವಿಗೆ ಹಾರೈಕೆಗಳು ನನ್ನನ್ನು ವ್ಯಾಕುಲಗೊಳಿಸಿದ್ದವು. ಈ ಸಂದರ್ಭದಲ್ಲಿ ನನ್ನ ಸ್ನೇಹಿತರೊಬ್ಬರು ಇದಕ್ಕೆ ನೀವೇನಾದರೂ ಮಾಡಬಹುದು, ದ್ವೇಷಪೂರಿತ ಅಭಿಯಾನಗಳಿಗೆ ಹಣಕಾಸು ನೆರವು ನಿಲ್ಲಿಸಿಬಿಡಿ ಎಂದು ಹೇಳಿದ್ದರು ’ಎಂದು ತಿಳಿಸಿದರು.

 ಸಮಾಜದ ನೆಮ್ಮದಿಯನ್ನು ಹರಡುವ ದುಷ್ಕೃತ್ಯದಲ್ಲಿ ತೊಡಗಿರುವ ಯಾವುದೇ ಮಾಧ್ಯಮದೊಂದಿಗೆ ತನ್ನ ಬ್ರ್ಯಾಂಡ್ ಗುರುತಿಸಿಕೊಳ್ಳುವುದಿಲ್ಲ ಮತ್ತು ದ್ವೇಷವನ್ನು ಹರಡುತ್ತಿರುವ ಮೂರು ಸುದ್ದಿವಾಹಿನಿಗಳಿಂದ ಜಾಹೀರಾತುಗಳನ್ನು ಹಿಂದೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದರು. ಬಜಾಜ್ ಇಂತಹ ಕ್ರಮವನ್ನು ಕೈಗೊಂಡ ಮೊದಲ ಕೈಗಾರಿಕೋದ್ಯಮಿಯಾಗಿದ್ದಾರೆ.

ಸಿಎನ್‌ಬಿಸಿಗೆ ನೀಡಿದ ಪ್ರತ್ಯೇಕ ಸಂದರ್ಶನದಲ್ಲಿ ಬಜಾಜ್,‘ಪ್ರಬಲ ಬ್ರ್ಯಾಂಡ್ ಪ್ರಬಲ ಉದ್ಯಮವನ್ನು ಕಟ್ಟಲು ಬುನಾದಿಯಾಗಿದೆ. ದಿನದ ಕೊನೆಯಲ್ಲಿ ಪ್ರಬಲ ಉದ್ಯಮದ ಉದ್ದೇಶವು ಸಮಾಜಕ್ಕೆ ಕೊಡುಗೆಯನ್ನೂ ಒಳಗೊಂಡಿರುತ್ತದೆ. ಸಮಾಜದಲ್ಲಿ ವಿಷವನ್ನು ಹರಡುವ ಯಾವುದರೊಂದಿಗೂ ನಮ್ಮ ಬ್ರ್ಯಾಂಡ್ ಗುರುತಿಸಿಕೊಂಡಿಲ್ಲ ’ ಎಂದು ಹೇಳಿದ್ದಾರೆ.

 ಖ್ಯಾತ ಬಿಸ್ಕಿಟ್ ತಯಾರಿಕೆ ಕಂಪನಿ ಪಾರ್ಲೆ ಇಂಡಿಯಾ ಲಿ.ಕೂಡ ಬಜಾಜ್ ದಾರಿಯನ್ನೇ ತುಳಿದಿದೆ. ಇತರ ಜಾಹೀರಾತುದಾರರನ್ನು ಒಟ್ಟುಗೂಡಿಸಿ ವಾಹಿನಿಗಳು ಸಮಾಜದ ನೆಮ್ಮದಿಯನ್ನು ಕದಡುವ ವಿಷಯಗಳನ್ನು ಪ್ರಸಾರ ಮಾಡುವುದಕ್ಕೆ ಕಡಿವಾಣ ಹಾಕಲು ನಾವು ಚಿಂತನೆ ನಡೆಸಿದ್ದೇವೆ ಎಂದು ಕಂಪನಿಯ ಹಿರಿಯ ಅಧಿಕಾರಿ ಕೃಷ್ಣರಾವ್ ಬುದ್ಧ ಅವರು ಹೇಳಿದ್ದಾರೆ.

ಬಜಾಜ್ ಹಿಂದೆ ನೋಟು ನಿಷೇಧ ಮತ್ತು ಕೋವಿಡ್ ಲಾಕ್‌ಡೌನ್ ಜಾರಿಗೊಳಿಸಿದ ರೀತಿಗಾಗಿ ನರೇಂದ್ರ ಮೋದಿ ಸರಕಾರವನ್ನು ಕಟುವಾಗಿ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News