×
Ad

ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಬಾಲಕಿ ಆತ್ಮಹತ್ಯೆ

Update: 2020-10-13 20:30 IST

ಲಕ್ನೊ, ಅ.13: ಹತ್ರಸ್ ಪ್ರಕರಣದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿರುವಂತೆಯೇ ಉತ್ತರಪ್ರದೇಶದಲ್ಲಿ ಮತ್ತೊಂದು ದುಷ್ಕೃತ್ಯ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮೂವರು ದುಷ್ಕರ್ಮಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಗೈದಿದ್ದು ಬಳಿಕ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಚಿತ್ರಕೂಟ ಜಿಲ್ಲೆಯ ಕೌಮ್ರಾಹ ಕಾ ಪೂರ್ವ ಗ್ರಾಮದಲ್ಲಿ ಅಕ್ಟೋಬರ್ 8ರಂದು ಈ ಘಟನೆ ನಡೆದಿದೆ. ಬಾಲಕಿ ಮನೆ ಪಕ್ಕದ ಗದ್ದೆಗೆ ತೆರಳಿದ್ದ ಸಂದರ್ಭ ಬೈಕಿನಲ್ಲಿ ಆಗಮಿಸಿದ ಮೂವರು ವ್ಯಕ್ತಿಗಳು ಅವಳನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿಹಾಕಿ ಸಮೀಪದ ನರ್ಸರಿಯ ಬಳಿ ಎಸೆದು ಹೋಗಿದ್ದಾರೆ.

ಮಗಳನ್ನು ಹುಡುಕುತ್ತಿದ್ದ ಹೆತ್ತವರು ನರ್ಸರಿ ಬಳಿ ಆಕೆಯನ್ನು ಕಂಡು ಮನೆಗೆ ಕರೆ ತಂದಿದ್ದಾರೆ. ಆದರೆ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದ ಬಾಲಕಿ ಆರೋಪಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಕೇಳಿದಾಗಲೂ ಬಾಲಕಿ ಯಾವುದೇ ಮಾಹಿತಿ ನೀಡಿಲ್ಲ. ಮನೆಗೆ ಮರಳಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತಳ ಹೆತ್ತವರು ನೀಡಿದ ಲಿಖಿತ ದೂರಿನಂತೆ ಪ್ರಕರಣ ದಾಖಲಿಸಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸ್ ವರಿಷ್ಠರು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News