ದೇಶದಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ ಇರುವವರು ಮಾತ್ರ ರಾಜ್ಯಪಾಲರು: ಸಂಜಯ್ ರಾವತ್

Update: 2020-10-16 13:00 GMT
ಸಂಜಯ್ ರಾವತ್

ಮುಂಬೈ: ದೇಶದಲ್ಲಿ ಕೇವಲ ಇಬ್ಬರು ರಾಜ್ಯಪಾಲರು ಇದ್ದಾರೆ, ಒಬ್ಬರು ಪಶ್ಚಿಮ ಬಂಗಾಳದಲ್ಲಿ ಹಾಗೂ ಇನ್ನೊಬ್ಬರು ಮಹಾರಾಷ್ಟ್ರದಲ್ಲಿ, ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ದೇವಸ್ಥಾನಗಳನ್ನು ಭಕ್ತರಿಗೆ ಮತ್ತೆ ತೆರೆಯುವ ವಿಚಾರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ತೀಕ್ಷ್ಣ ಪತ್ರಕ್ಕೆ ಪ್ರತಿಯಾಗಿ ರಾವತ್ ಮೇಲಿನಂತೆ ಹೇಳಿದ್ದಾರೆ.

"ರಾಜ್ಯಪಾಲರು ರಾಷ್ಟ್ರಪತಿ ಹಾಗೂ ಕೇಂದ್ರ ಸರಕಾರದ ರಾಜಕೀಯ ಏಜಂಟ್,  ರಾಜಕೀಯ ಏಜಂಟ್ ಎಂದರೆ ಅವರು ರಾಜಕೀಯ ಕೆಲಸ ಮಾಡುತ್ತಾರೆಂದು ಅರ್ಥ. ಇಂದು ಇಡೀ ದೇಶದಲ್ಲಿ ಕೇವಲ ಇಬ್ಬರು ರಾಜ್ಯಪಾಲರು ಇದ್ದಾರೆ-ಒಬ್ಬರು ಮಹಾರಾಷ್ಟ್ರ ಮತ್ತು ಇನ್ನೊಬ್ಬರು ಪಶ್ಚಿಮ ಬಂಗಾಳದಲ್ಲಿ. ಇತರರ ಬಗ್ಗೆ ನನಗೆ ತಿಳಿದಿಲ್ಲ. ಏಕೆಂದರೆ  ಈ ಎರಡು ರಾಜ್ಯಗಳಲ್ಲಿ  ಅವರ ವಿಪಕ್ಷಗಳ ಸರಕಾರಗಳಿವೆ,'' ಎಂದು ರಾವತ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದರು.

"ಮಹಾರಾಷ್ಟ್ರದಲ್ಲಿ ಏನಾದರೂ ತಪ್ಪಾಗಿದೆಯೆಂದು ಅವರು (ಕೇಂದ್ರ) ಅಂದುಕೊಂಡಿದ್ದರೆ ಅದು ಅವರ ಸಮಸ್ಯೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದ್ದು ಹಾಗೂ ಕೇಂದ್ರದಲ್ಲಿ ಬೇರೆ ಪಕ್ಷದ ಸರಕಾರವಿದ್ದಿದ್ದರೆ ಹಾಗೂ ರಾಜ್ಯಪಾಲರು ಈ ರೀತಿ ವರ್ತಿಸಿದ್ದರೆ ಆಗ ಬಿಜೆಪಿ ಕೂಡ ರಾಜ್ಯಪಾಲರನ್ನು ವಾಪಸ್ ಕರೆಸುವಂತೆ ಆಗ್ರಹಿಸುತ್ತಿತ್ತು,'' ಎಂದು ರಾವತ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಸರಕಾರದ ಕ್ರಮಗಳನ್ನು ಟೀಕಿಸಿ  ಆಗಾಗ ಸುದ್ದಿಯಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News