ಲೈಂಗಿಕ ಕಿರುಕುಳ ಸಂತ್ರಸ್ತೆಯಿಂದ ರಾಖಿ ಕಟ್ಟಿಸಿಕೊಳ್ಳಬೇಕು ಎಂಬ ಹೈಕೋರ್ಟ್ ಆದೇಶದ ವಿರುದ್ಧ ಎಂಟು ವಕೀಲೆಯರ ಅಪೀಲು
ಹೊಸದಿಲ್ಲಿ: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿಯೊಬ್ಬನಿಗೆ ಜಾಮೀನು ನೀಡುವ ವೇಳೆ ಆತ ತನಗೆ ರಾಖಿ ಕಟ್ಟುವಂತೆ ಸಂತ್ರಸ್ತೆಗೆ ಮನವಿ ಮಾಡಬೇಕೆಂಬ ವಿವಾದಾತ್ಮಕ ಷರತ್ತು ವಿಧಿಸಿದ್ದ ಮಧ್ಯ ಪ್ರದೇಶ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿ ಎಂಟು ಮಂದಿ ವಕೀಲೆಯರು ಸಲ್ಲಿಸಿದ್ದ ಅಪೀಲಿನ ಮೇಲೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಕುರಿತಂತೆ ಅಟಾರ್ನಿ ಜನರಲ್ ಅವರ ಸಹಾಯ ಕೋರಿದೆ.
ದೇಶದ ನ್ಯಾಯಾಲಯಗಳು ಇಂತಹ ಷರತ್ತುಗಳನ್ನು ವಿಧಿಸುವುದಕ್ಕೆ ನಿರ್ಬಂಧ ಹೇರಬೇಕೆಂದು ಕೋರಿ ವಕೀಲೆಯರು ತಮ್ಮ ಅಪೀಲಿನಲ್ಲಿ ಹೇಳಿರುವುದರಿಂದ ಈ ಕುರಿತಂತೆ ಜಸ್ಟಿಸ್ ಎ ಎಂ ಖನ್ವಿಲ್ಕರ್ ಅವರ ಪೀಠ ವಿಚಾರಣೆಗೆ ಸಹಕರಿಸುವಂತೆ ಕೋರಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ಕಚೇರಿಗೆ ನೋಟಿಸ್ ಜಾರಿಗೊಳಿಸಿದೆ.
ಮಧ್ಯ ಪ್ರದೇಶ ಹೈಕೋರ್ಟ್ ತನ್ನ ಜುಲೈ 30ರ ಆದೇಶದಲ್ಲಿ ಆರೋಪಿಗೆ ಜಾಮೀನು ನೀಡಿತ್ತಲ್ಲದೆ ಆತ ಮತ್ತಾತನ ಪತ್ನಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ಆತನಿಗೆ ರಾಖಿ ಕಟ್ಟುವಂತೆ ಮನವಿ ಮಾಡುವುದರ ಜತೆಗೆ ಭವಿಷ್ಯದಲ್ಲಿ ಆಕೆಯನ್ನು ತನ್ನ ಸಾಮಥ್ರ್ಯಕ್ಕೆ ಅನುಸಾರವಾಗಿ ರಕ್ಷಿಸುವ ಭರವಸೆ ನೀಡಬೇಕೆಂಬ ಷರತ್ತು ವಿಧಿಸಿತ್ತು.
ಇದರ ವಿರುದ್ಧ ವಕೀಲೆ ಅಪರ್ಣ ಭಟ್ ಸಹಿತ ಎಂಟು ಮಂದಿ ಇತರ ವಕೀಲೆಯರು ಸಲ್ಲಿಸಿದ್ದ ಅಪೀಲಿನ ಪರ ವಾದ ಮಂಡಿಸಿದ ಸಂಜಯ್ ಪಾರಿಖ್, ಅಭೂತಪೂರ್ವ ಸನ್ನಿವೇಶದಲ್ಲಿ ಈ ಅಪೀಲು ಮಾಡಲಾಗಿದೆ ಎಂದಿದ್ದಾರೆ.