ವಧು-ವರರ ಸಮಾವೇಶ ನಡೆಯಲಿ

Update: 2020-10-16 17:47 GMT

ಮಾನ್ಯರೇ,

ರಾಜ್ಯ ಸರಕಾರದ ಮುಜರಾಯಿ ಇಲಾಖೆಯು ಸರಕಾರದ ವತಿಯಿಂದಲೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಈ ಹಿಂದೆಯೇ ನಡೆಸಿ ಕೊಡುವುದಾಗಿ ಹೇಳಿದ್ದು, ಈಗ ಕೊರೋನ ಕಾರಣದಿಂದ ನಿಂತುಹೋಗಿದೆ. ಇಂತಹ ಕಾರ್ಯಕ್ರಮಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸರೆಯಾಗುವ ಜೊತೆಗೆ ಅದ್ದೂರಿ ವಿವಾಹದ ದುಂದುವೆಚ್ಚಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಇನ್ನೊಂದೆಡೆ ಮದುವೆಯಾಗಲು ಹೊರಡುವ ಗಂಡು/ಹೆಣ್ಣು ಮಕ್ಕಳಿಗೆ ಎಷ್ಟೋ ಕಡೆ ಸಂಬಂಧಗಳು ಸಿಗುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಹೀಗಾಗಿ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಇಂದಿಗೂ ಕೂಡ ಹೆಚ್ಚಾಗಿ ಅವಿವಾಹಿತರು ಕಂಡುಬರುತ್ತಾರೆ. ಅಲ್ಲದೆ ಮಧ್ಯವರ್ತಿಗಳು ಒಂದು ಬಾರಿ ಹೆಣ್ಣು/ಗಂಡು ತೋರಿಸಿದರೆ ಕನಿಷ್ಠ ಐನೂರರಿಂದ ಒಂದು ಸಾವಿರ ಹಣವನ್ನು ಪೀಕುತ್ತಾರೆ. ಈ ಹಣವು ಬಡ ಮತ್ತು ಮಧ್ಯಮ ವರ್ಗಗಳ ಕುಟುಂಬಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹಾಗಾಗಿ ರಾಜ್ಯ ಸರಕಾರದ ವತಿಯಿಂದಲೇ ಕನಿಷ್ಠ ವರ್ಷಕ್ಕೆ ಒಂದೆರಡು ಬಾರಿ ಅಲ್ಲಲ್ಲಿ ಎಲ್ಲ ಜಾತಿ, ಧರ್ಮಗಳ ವಧು-ವರರ ಸಮಾವೇಶವನ್ನು ಆಯೋಜಿಸಿದರೆ ಹೆಚ್ಚಿನ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬಂದೀತು. ಇಂತಹ ವಿಶಿಷ್ಟ ಯೋಜನೆಯನ್ನು ಕರ್ನಾಟಕ ಸರಕಾರ ಜಾರಿಗೆ ತಂದದ್ದೇ ಆದಲ್ಲಿ ಈ ಯೋಜನೆ ಇಡೀ ದೇಶಕ್ಕೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಮತ್ತು ಲಕ್ಷಾಂತರ ಜೋಡಿಗಳ ಮದುವೆ ಮಾಡಿಸಿದ ಪುಣ್ಯವೂ ಸರಕಾರಕ್ಕೆ ಲಭಿಸುತ್ತದೆ. 

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News