ನೀಟ್: ಟೈಬ್ರೇಕರ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡ ದಿಲ್ಲಿ ಬಾಲಕಿ

Update: 2020-10-17 10:51 GMT

ಹೊಸದಿಲ್ಲಿ, ಅ.17: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ದಿಲ್ಲಿಯ ಆಕಾಂಕ್ಷಾ 720ಕ್ಕೆ 720 ಅಂಕಗಳನ್ನು ಗಳಿಸಿದರೂ, ಅಷ್ಟೇ ಅಂಕ ಗಳಿಸಿದ ಒಡಿಶಾದ ಶುಐಬ್ ಅಫ್ತಾಬ್ ಅಗ್ರಸ್ಥಾನಿ ಎಂದು ಪ್ರಕಟಿಸಲಾಯಿತು. ಆಕಾಂಕ್ಷಾ ಅಫ್ತಾಬ್‌ಗಿಂತ ಕಿರಿಯ ವಯಸ್ಸಿನವರಾಗಿದ್ದುದು ಇದಕ್ಕೆ ಕಾರಣ.

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಟೈ ಬ್ರೇಕಿಂಗ್ ನಿಯಮಾಳಿಯಲ್ಲಿ ವಯಸ್ಸು ಕೂಡಾ ಒಂದು ನಿರ್ಧಾರಕ ಅಂಶ. ಎನ್‌ಟಿಎ ಮೂಲಗಳ ಪ್ರಕಾರ, ವಯಸ್ಸು, ವಿಷಯವಾರು ಅಂಕ ಹಾಗೂ ತಪ್ಪು ಉತ್ತರಗಳ ಸಂಖ್ಯೆಯನ್ನು ಟೈಬ್ರೇಕರ್‌ನಲ್ಲಿ ಪರಿಗಣಿಸಲಾಗುತ್ತದೆ.

"ನೀಟ್ ಪರೀಕ್ಷೆಯಲ್ಲಿ ಶುಐಬ್ ಅಫ್ತಾಬ್ ಮತ್ತು ಆಕಾಂಕ್ಷಾ ಸಿಂಗ್ ಇಬ್ಬರೂ ಪರಿಪೂರ್ಣ 720 ಅಂಕ ಗಳಿಸಿದ್ದರು. ಆದರೆ ಅಫ್ತಾಬ್ ವಯಸ್ಸು ಅಧಿಕ ಇದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ನೀಡಲಾಗಿದೆ" ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

"ಅಭ್ಯರ್ಥಿಯ ರ್ಯಾಂಕಿಂಗ್ ಅನ್ನು ಪ್ರಮುಖವಾಗಿ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಾದ ಬಳಿಕ ಅಂಕಗಳ ಆಧಾರದಲ್ಲಿ ಪಟ್ಟಿ ಮಾಡಲಾಗುತ್ತದೆ. ನಂತರದ ಹಂತದಲ್ಲಿ ತಪ್ಪು ಉತ್ತರಗಳನ್ನು ಪರಿಗಣಿಸಿ ಆಯ್ದ ಅಭ್ಯರ್ಥಿಗಳ ಪಟ್ಟಿ ಮಾಡಲಾಗುತ್ತದೆ. ಅಂತಿಮವಾಗಿ ಅವರ ವಯಸ್ಸು ಮಾನದಂಡವಾಗುತ್ತದೆ. ಹೆಚ್ಚು ವಯಸ್ಸಿನವರು ಆದ್ಯತೆ ಪಡೆಯುತ್ತಾರೆ" ಎಂದು ವಿವರಿಸಿದ್ದಾರೆ.

ಶುಕ್ರವಾರ ರಾತ್ರಿ ನೀಟ್ ಫಲಿತಾಂಶ ಪ್ರಕಟಿಸಲಾಗಿದ್ದು, 7.7 ಲಕ್ಷ ಮಂದಿ ಅರ್ಹತೆ ಪಡೆದಿದ್ದಾರೆ. ಇದೇ ಟೈಬ್ರೇಕ್ ನಿಯಮವನ್ನು ರ್ಯಾಂಕಿಂಗ್ ನಿರ್ಧರಿಸುವಲ್ಲೂ ಬಳಸಲಾಗುತ್ತದೆ. ತುಮ್ಮಲ ಸ್ನಿಕಿತಾ (ತೆಲಂಗಾಣ), ವಿನೀತ್ ಶರ್ಮಾ (ರಾಜಸ್ಥಾನ), ಅಮ್ರೀಶ್ ಖೈತಾನ್ (ಹರ್ಯಾಣ) ಮತ್ತು ಗುತ್ತಿ ಚೈತನ್ಯ ಸಿಂಧು (ಆಂಧ್ರಪ್ರದೇಶ) ಅವರು 720ರಲ್ಲಿ 715 ಅಂಕ ಪಡೆದಿದ್ದಾರೆ. ಆದರೆ ಇವರಿಗೆ ಕ್ರಮವಾಗಿ 3,4,5 ಹಾಗೂ 6ನೇ ರ್ಯಾಂಕ್ ನೀಡಲಾಗಿದೆ. 8ರಿಂದ 20ನೇ ರ್ಯಾಂಕ್ ಗಳಿಸಿದವರು ತಲಾ 710 ಅಂಕ ಹಾಗೂ 25ರಿಂದ 60ನೇ ರ್ಯಾಂಕ್ ಪಡೆದವರು 705 ಅಂಕ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News