2019-20ರಲ್ಲಿ ಲೋಕಪಾಲಕ್ಕೆ 1,427 ದೂರುಗಳ ಸಲ್ಲಿಕೆ

Update: 2020-10-17 17:21 GMT

ಹೊಸದಿಲ್ಲಿ,ಅ.17: ಭ್ರಷ್ಟಾಚಾರ ನಿಗ್ರಹಕ್ಕಾಗಿ ಓಂಬುಡ್ಸ್‌ಮನ್ ವ್ಯವಸ್ಥೆಯಾಗಿರುವ ಲೋಕಪಾಲಕ್ಕೆ 2019-20ರಲ್ಲಿ ಒಟ್ಟು 1,427 ದೂರುಗಳು ಸಲ್ಲಿಕೆಯಾಗಿದ್ದು,ಈ ಪೈಕಿ 613 ದೂರುಗಳು ರಾಜ್ಯಗಳ ಸರಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ್ದರೆ ನಾಲ್ಕು ದೂರುಗಳು ಕೇಂದ್ರ ಸಚಿವರು ಮತ್ತು ಸಂಸದರ ವಿರುದ್ಧವಾಗಿದ್ದವು.

ಈ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿರುವ ಲೋಕಪಾಲ ಸಂಸ್ಥೆಯು 245 ದೂರುಗಳು ಕೇಂದ್ರ ಸರಕಾರಿ ಅಧಿಕಾರಿಗಳ ವಿರುದ್ಧವಾಗಿದ್ದರೆ 200 ದೂರುಗಳು ಕೇಂದ್ರಮಟ್ಟದಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ಶಾಸನಬದ್ಧ ಸಂಸ್ಥೆಗಳು,ನ್ಯಾಯಾಂಗ ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳ ವಿರುದ್ಧ ಸಲ್ಲಿಕೆಯಾಗಿದ್ದವು. 135 ದೂರುಗಳು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧವಾಗಿದ್ದವು ಎಂದು ತಿಳಿಸಿದೆ.

 ರಾಜ್ಯಗಳ ಸಚಿವರು ಮತ್ತು ಶಾಸಕರ ವಿರುದ್ಧ ಆರು ದೂರುಗಳಿದ್ದರೆ,ಕೇಂದ್ರ ಸಚಿವರ ವಿರುದ್ಧ ನಾಲ್ಕು ದೂರುಗಳು ಸಲ್ಲಿಕೆಯಾಗಿದ್ದವು. ಒಟ್ಟು ದೂರುಗಳ ಪೈಕಿ 220 ಮನವಿಗಳು,ಪ್ರತಿಕ್ರಿಯೆಗಳು ಮತ್ತು ಸಲಹೆಗಳಾಗಿದ್ದವು ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.

ಒಟ್ಟು 613 ದೂರುಗಳು ರಾಜ್ಯ ಸರಕಾರಿ ಅಧಿಕಾರಿಗಳು ಹಾಗೂ ರಾಜ್ಯಮಟ್ಟದಲ್ಲಿ ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ಶಾಸನಬದ್ಧ ಸಂಸ್ಥೆಗಳು,ನ್ಯಾಯಾಂಗ ಮತ್ತು ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳಿಗೆ ಸಂಬಂಧಿಸಿದ್ದವು. ಒಟ್ಟು ದೂರುಗಳ ಪೈಕಿ 1,347 ದೂರುಗಳನ್ನು ವಿಲೇವಾರಿಗೊಳಿಸಲಾಗಿದೆ. 1,152 ದೂರುಗಳು ಲೋಕಪಾಲದ ವ್ಯಾಪ್ತಿಯನ್ನು ಮೀರಿದ್ದವು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

29 ಪ್ರಕರಣಗಳು ಕೇಂದ್ರ ಜಾಗೃತ ಆಯೋಗದಲ್ಲಿ ಮತ್ತು 11 ಪ್ರಕರಣಗಳು ವಿವಿಧ ಇಲಾಖೆಗಳಲ್ಲಿ ಬಾಕಿಯುಳಿದಿವೆ. ಆರು ಪ್ರಕರಣಗಳು ವಿವಿಧ ಇಲಾಖೆಗಳಿಂದ ಸ್ಥಿತಿಗತಿ ವರದಿಗಳಿಗಾಗಿ ಬಾಕಿಯಿವೆ.

ನ್ಯಾ.ಪಿನಾಕಿಚಂದ್ರ ಘೋಷ್ ಅವರ ನೇತೃತ್ವದಲ್ಲಿ ಕಳೆದ ವರ್ಷದ ಮಾ.23ರಂದು ಅಸ್ತಿತ್ವಕ್ಕೆ ಬಂದಿರುವ ಲೋಕಪಾಲ ವ್ಯವಸ್ಥೆಯು ಸರಕಾರಿ ನೌಕರರು ಮತ್ತು ಜನಪ್ರತಿನಿಧಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ಕೈಗೊಳ್ಳುವ ಉನ್ನತ ಸಂಸ್ಥೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News