ನಮ್ಮ ಸಿಟ್ಟಿನ ಕಾರಣ ಅರ್ಥೈಸಿಕೊಂಡದ್ದಕ್ಕೆ ಧನ್ಯವಾದ: ಅಮಿತ್ ಶಾ ಹೇಳಿಕೆಗೆ ಶಿವಸೇನೆ ಪ್ರತಿಕ್ರಿಯೆ

Update: 2020-10-18 16:28 GMT

ಮುಂಬೈ, ಅ.18: ಮಹಾರಾಷ್ಟ್ರದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯುವ ವಿಚಾರದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದಿರುವ ಪತ್ರದಲ್ಲಿ ರಾಜ್ಯಪಾಲರು ಪದ ಬಳಕೆಯ ಸಂದರ್ಭ ಹೆಚ್ಚಿನ ಸಂಯಮ ವಹಿಸಬೇಕಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಸ್ವಾಗತಿಸುವುದಾಗಿ ಶಿವಸೇನೆಯ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.

ರಾಜ್ಯಪಾಲರ ಪತ್ರ ಹಾಗೂ ಅದಕ್ಕೆ ಮುಖ್ಯಮಂತ್ರಿಗಳು ನೀಡಿದ್ದ ಉತ್ತರವು ವಿವಾದವಾಗಿತ್ತು ಮತ್ತು ನಾವು ಇದನ್ನು ಆರಂಭಿಸಿರಲಿಲ್ಲ. ಆದರೆ ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ನಿಲುವು ನಮಗೆ ಸಮಾಧಾನ ತಂದಿದೆ ಮತ್ತು ನಮ್ಮ ಸಿಟ್ಟಿನ ಕಾರಣವನ್ನು ಅರ್ಥೈಸಿಕೊಂಡದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಮತ್ತು ಈ ವಿಷಯವನ್ನು ಇಲ್ಲಿಗೇ ಮುಕ್ತಾಯಗೊಳಿಸಲು ನಿರ್ಧರಿಸಿದ್ದೇವೆ ಎಂದವರು ಹೇಳಿದ್ದಾರೆ.

    ಶಾ ಹೇಳಿಕೆ ಬಿಜೆಪಿಯು ಶಿವಸೇನೆಯ ಬಗ್ಗೆ ಮೃದುಧೋರಣೆ ತಳೆಯುತ್ತಿರುವ ಸೂಚಕವೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ರಾವತ್, ಅಮಿತ್ ಶಾ ದೇಶದ ಗೃಹ ಮಂತ್ರಿಯಾಗಿದ್ದಾರೆ ಮತ್ತು ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಹೇಳಿಕೆ ನೀಡಿದ್ದಾರೆ . ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದರು.

ನಟ ಸುಷಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಮೊದಲೇ ಸಿಬಿಐಗೆ ವಹಿಸಬೇಕಿತ್ತು ಎಂಬ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ರಾವತ್ “ಮುಂಬೈ ಪೊಲೀಸರು ಪ್ರಕರಣದ ವಿಚಾರಣೆ ನಡೆಸಲು ಸಮರ್ಥರಿರುವಾಗ ಸಿಬಿಐಗೆ ಯಾಕೆ ವಹಿಸಬೇಕಿತ್ತು? ತನಿಖೆ ಮುಕ್ತಾಯಗೊಳ್ಳುವ ಮೊದಲೇ ಅದನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ಆದರೆ ಸಿಬಿಐ ಏನು ಕಂಡುಹಿಡಿದಿದೆ? ಸತ್ಯ ಹೊರಬರಲಿದೆ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News