ಕೋವಿಡ್-19 : ಮೃತರ ಸಂಖ್ಯೆ 98 ದಿನಗಳಲ್ಲೇ ಕನಿಷ್ಠ

Update: 2020-10-25 04:00 GMT

ಹೊಸದಿಲ್ಲಿ : ದೇಶದಲ್ಲಿ ಶನಿವಾರ 580 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು, ಇದು 98 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಇದು ದೇಶದ ಬಹುತೇಕ ಕಡೆಗಳಲ್ಲಿ ಸಾಂಕ್ರಾಮಿಕ ಇಳಿಮುಖವಾಗುತ್ತಿರುವುದರ ಸ್ಪಷ್ಟ ಸೂಚನೆಯಾಗಿದೆ.

ಈ ಹಿಂದೆ ದಿನವೊಂದರಲ್ಲಿ ಕನಿಷ್ಠ ಸಾವು ಜುಲೈ 18ರಂದು ದಾಖಲಾಗಿತ್ತು. ಸಾವಿನ ಸಂಖ್ಯೆಯ ಈ ವಾರದ ದೈನಿಕ ಸರಾಸರಿ ಸೆಪ್ಟೆಂಬರ್ ಮಧ್ಯಕ್ಕೆ ಹೋಲಿಸಿದರೆ ಅರ್ಧದಷ್ಟಾಗಿದೆ. ಸೆಪ್ಟೆಂಬರ್ 15ರಂದು ದೇಶದಲ್ಲಿ ಇದುವರೆಗಿನ ಗರಿಷ್ಠ ಅಂದರೆ 1275 ಸಾವು ದಾಖಲಾಗಿತ್ತು.

ಹೊಸ ಪ್ರಕರಣಗಳ ಇಳಿಕೆ ಪ್ರವೃತ್ತಿಯೂ ಮುಂದುವರಿದಿದೆ. ಶನಿವಾರ 51023 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಈ ವಾರದ ಕನಿಷ್ಠ ಸಂಖ್ಯೆಯಾಗಿದೆ. ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 78,63,913 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 6.75 ಲಕ್ಷಕ್ಕೆ ಇಳಿದಿದೆ. 70,69,999 ಮಂದಿ ಇದುವರೆಗೆ ಚೇತರಿಸಿಕೊಂಡಿದ್ದು, ಒಟ್ಟು ಗುಣಮುಖರಾದವರ ಪ್ರಮಾಣ ಶೇಕಡ 89.9ರಷ್ಟಿದೆ.

ಈ ಮಧ್ಯೆ ಶನಿವಾರ ದೇಶದಲ್ಲೇ ಅತ್ಯಧಿಕ ಪ್ರಕರಣ (8253) ಕೇರಳದಲ್ಲಿ ದಾಖಲಾಗಿದೆ. ಆದರೆ ಇದು ಶುಕ್ರವಾರ ರಾಜ್ಯದಲ್ಲಿ ದಾಖಲಾದ 8511 ಪ್ರಕರಣಗಳಿಗೆ ಹೋಲಿಸಿದರೆ ತುಸು ಕಡಿಮೆ. ದೆಹಲಿಯಲ್ಲಿ 4116 ಹೊಸ ಪ್ರಕರಣ ಸೇರ್ಪಡೆಯಾಗಿದ್ದು, ಸೆಪ್ಟೆಂಬರ್ 18ರ ಬಳಿಕ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಬಂಗಾಳದಲ್ಲಿ ಕೂಡಾ 4148 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗಿನ ಗರಿಷ್ಠ ಅಂದರೆ 4157 ಪ್ರಕರಣಗಳು ಗುರುವಾರ ದಾಖಲಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News