ಅರ್ನಬ್ ಗೋಸ್ವಾಮಿ ಬಂಧನ: ಯಾರೂ ಕಾನೂನಿಗಿಂತ ದೊಡ್ಡವರಲ್ಲ; ಅನಿಲ್ ದೇಶ್‌ಮುಖ್

Update: 2020-11-04 14:22 GMT

ಮುಂಬೈ, ನ.4: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಬುಧವಾರ ಬೆಳಿಗ್ಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಗೋಸ್ವಾಮಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್, ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಪೊಲೀಸರು ಕಾನೂನಿನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಮೃತ ಇಂಟೀರಿಯರ್ ಡಿಸೈನರ್ (ಒಳಾಂಗಣ ವಿನ್ಯಾಸಗಾರ) ಪತ್ನಿ ನ್ಯಾಯಾಲಯದ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಮತ್ತೆ ತೆರೆಯಲು ಅನುಮತಿ ನೀಡಿದೆ’ ಎಂದು ಹೇಳಿದರು. ಅಲಿಬಾಗ್‌ನ ಕಾವಿರ್ ಗ್ರಾಮದ ನಿವಾಸಿ, ಒಳಾಂಗಣ ವಿನ್ಯಾಸಗಾರ ಅನ್ವಯ್ ನಾಯಕ್ ಹಾಗೂ ಅವರ ತಾಯಿ ಕುಮುದಾ 2018ರಲ್ಲಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆಯಲ್ಲಿ ದೊರೆತ ಡೆತ್‌  ನೋಟ್‌ನಲ್ಲಿ ‘ತನಗೆ ಬರಬೇಕಿರುವ 5.40 ಕೋಟಿ ರೂ. ಮೊತ್ತದ ಹಣವನ್ನು ಅರ್ನಬ್ ಗೋಸ್ವಾಮಿ, ಫಿರೋಝ್ ಶೇಖ್ ಮತ್ತು ನಿತೇಶ್ ಪಾವತಿಸದೆ ಸತಾಯಿಸುತ್ತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ನಾಯಕ್ ಬರೆದಿದ್ದರು ಎಂದು ಪೊಲೀಸರು ಹೇಳಿದ್ದರು. ಈ ಪ್ರಕರಣದ ಎಫ್‌ಐಆರ್‌ನಲ್ಲಿ ಗೋಸ್ವಾಮಿಯಿಂದ 83 ಲಕ್ಷ ರೂ, ಶೇಖ್‌ನಿಂದ 4 ಕೋಟಿ ಮತ್ತು ನಿತೇಶ್‌ನಿಂದ 55 ಲಕ್ಷ ರೂ. ಹಣ ಬಾಕಿಯಿದೆ ಎಂದು ಉಲ್ಲೇಖಿಸಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಸಂದೇಶ ಕಳುಹಿಸಿದ್ದ ನಾಯಕ್ ಪತ್ನಿ, ಅರ್ನಬ್ ಗೋಸ್ವಾಮಿಯ ಪ್ರಚೋದನೆಯಿಂದ ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೋಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.

ಈ ಮಧ್ಯೆ, ಗೋಸ್ವಾಮಿಯ ಬಂಧನದ ಬಗ್ಗೆ ಪೊಲೀಸರು ಅವರ ಪತ್ನಿಗೆ ಮಾಹಿತಿ ನೀಡಿಲ್ಲ ಎಂದು ಗೋಸ್ವಾಮಿಯ ವಕೀಲರು ಆರೋಪಿಸಿದ್ದಾರೆ. ಗೋಸ್ವಾಮಿಯನ್ನು ಇಬ್ಬರು ಪೊಲೀಸರು ಥಳಿಸಿದ್ದಾರೆ. ರಕ್ಷಣೆಗೆ ಬಂದ ಕುಟುಂಬದ ಸದಸ್ಯರನ್ನು ಪೊಲೀಸರು ದೂಡಿ ಹಾಕಿದ್ದು ಗೋಸ್ವಾಮಿಯ ಎಡಗೈಗೆ ಗಾಯವಾಗಿದೆ. ಮನೆಯನ್ನು 3 ಗಂಟೆ ಪೊಲೀಸರು ಸುತ್ತುವರಿದಿದ್ದರು ಎಂದು ವಕೀಲರು ಆರೋಪಿಸಿದ್ದಾರೆ. ಅರ್ನಬ್ ಗೋಸ್ವಾಮಿ ಬಂಧನ ಪ್ರಕರಣ ಅತ್ಯಂತ ನೋವಿನ ಘಟನೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News