ಗೋಸ್ವಾಮಿ ಬಂಧನ ಪ್ರಕರಣ: ರಾಜಕೀಯ ಮುಖಂಡರ ಪ್ರತಿಕ್ರಿಯೆ

Update: 2020-11-04 14:32 GMT

ಮುಂಬೈ, ನ.4: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಬಂಧನದ ಬಗ್ಗೆ ಕೇಂದ್ರ ಗೃಹ ಸಚಿವ, ಕಾನೂನು ಸಚಿವರ ಸಹಿತ ಪ್ರಮುಖ ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದಾರೆ.   

ಕಾಂಗ್ರೆಸ್ ಮತ್ತು ಅದರ ಮಿತ್ರರು ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಅಪಮಾನಿಸಿದ್ದಾರೆ. ರಿಪಬ್ಲಿಕ್ ಟಿವಿ ಮತ್ತು ಗೋಸ್ವಾಮಿ ವಿರುದ್ಧ ರಾಜ್ಯಾಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ವೈಯಕ್ತಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಇದು ತುರ್ತುಪರಿಸ್ಥಿತಿಯನ್ನು ನೆನಪಿಸುತ್ತದೆ. ಮುಕ್ತ ಪತ್ರಿಕೆಯ ಮೇಲಿನ ಈ ದಾಳಿಯನ್ನು ವಿರೋಧಿಸಬೇಕು - ಗೃಹ ಸಚಿವ ಅಮಿತ್ ಶಾ.

ಸೂಕ್ತ ಪುರಾವೆಗಳಿದ್ದರೆ ಪೊಲೀಸರು ಯಾರ ವಿರುದ್ಧವೂ ಕ್ರಮ ಜರಗಿಸಬಹುದು. ಗೋಸ್ವಾಮಿ ಬಂಧನವೂ ಕಾನೂನಿನ ಪ್ರಕಾರವೇ ಜರಗಿದೆ. ರಾಜ್ಯದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಯಾರ ವಿರುದ್ಧವೂ ದ್ವೇಷ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿಲ್ಲ - ಶಿವಸೇನ ಮುಖಂಡ ಸಂಜಯ್ ರಾವತ್. 

ಮಹಾರಾಷ್ಟ್ರದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಖಂಡನೀಯ - ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್  ಜಾವಡೇಕರ್.  

ಕಾಂಗ್ರೆಸ್ ಮುಖಂಡರಾದ ಸೋನಿಯಾ ಮತ್ತು ರಾಹುಲ್ ಗಾಂಧಿ ಆದೇಶದಂತೆ ಗೋಸ್ವಾಮಿಯನ್ನು ಬಂಧಿಸಲಾಗಿದೆ- ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್.  

ಇದು ಸರ್ವಾಧಿಕಾರಿ ಮನಸ್ಥಿತಿ ಮತ್ತು ಅಘೋಷಿತ ತುರ್ತುಪರಿಸ್ಥಿತಿಯ ಸಂಕೇತವಾಗಿದ್ದು ಪತ್ರಕರ್ತ ಗೋಸ್ವಾಮಿಯ ಮೇಲೆ ನಡೆದಿರುವ ಹಲ್ಲೆ ಅಧಿಕಾರದ ದುರುಪಯೋಗಕ್ಕೆ ದೃಷ್ಟಾಂತವಾಗಿದೆ- ರೈಲ್ವೇ ಸಚಿವ ಪಿಯೂಷ್ ಗೋಯಲ್.

ನೀವು ಗೋಸ್ವಾಮಿಯನ್ನು ಬೆಂಬಲಿಸದಿರಬಹುದು ಅಥವಾ ನಿಮಗೆ ಅವರು ಇಷ್ಟವಾಗದಿರಬಹುದು. ಆದರೆ ಈ ಸಂದರ್ಭದಲ್ಲಿ ನೀವು ಮೌನವಾಗಿದ್ದರೆ ನೀವು ದಮನಕಾರಿ ಶಕ್ತಿಗಳನ್ನು ಬೆಂಬಲಿಸಿದಂತಾಗುತ್ತದೆ- ಕೇಂದ್ರ ಸಚಿವೆ ಸ್ಮೃತಿ ಇರಾನಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News