×
Ad

ಉಮರ್ ಖಾಲಿದ್ ವಿಚಾರಣೆಗೆ ದಿಲ್ಲಿ ಸರಕಾರ ಅನುಮತಿ: ಕೇಜ್ರಿವಾಲ್ ವಿರುದ್ಧ ನೆಟ್ಟಿಗರ ಆಕ್ರೋಶ

Update: 2020-11-06 19:33 IST

ಹೊಸದಿಲ್ಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರವು ಮಾಜಿ ಜೆಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ಈ ವರ್ಷ ನಡೆದಿರುವ ದಿಲ್ಲಿ ಗಲಭೆಗೆ ಸಂಬಂಧಿಸಿ ವಿಚಾರಣೆಗೆ ಅನುಮತಿ ನೀಡಿದೆ. ಕೇಜ್ರಿವಾಲ್ ಸರಕಾರದ ನಿರ್ಧಾರವನ್ನು ಖಂಡಿಸಿರುವ ನೆಟ್ಟಿಗರು ನಿಮಗೆ ನಾಚಿಕೆಯಾಗಬೇಕೆಂದು ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಲ್ಲಿ ಗಲಭೆಗಳಿಗೆ ಸಂಬಂಧಿಸಿ ಪೊಲೀಸರು ದಾಖಲಿಸಿರುವ ಎಲ್ಲ ಪ್ರಕರಣಗಳಿಗೆ ನಾವು ಅನುಮತಿ ನೀಡುತ್ತಿದ್ದೇವೆ. ಈಗ  ಆರೋಪಿಗಳು ಯಾರು ಎಂದು ನೋಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರವಾಗಿದೆ ಎಂದು ದಿಲ್ಲಿ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈಶಾನ್ಯ ದಿಲ್ಲಿಯಲ್ಲಿ ನಡೆದಿರುವ ಗಲಭೆಗಳಲ್ಲಿ ಶಾಮೀಲಾಗಿರುವ ಆರೋಪದಲ್ಲಿ ದಿಲ್ಲಿ ಪೊಲೀಸರು ಯುಎಪಿಎ ಅಡಿ ಸೆಪ್ಟಂಬರ್ ನಲ್ಲಿ ಉಮರ್ ಖಾಲಿದ್ ಅವರನ್ನು ಬಂಧಿಸಿದ್ದರು.  ದಿಲ್ಲಿ ಪೊಲೀಸರು ಖಾಲಿದ್ ವಿರುದ್ಧ ವಿಚಾರಣೆಗೆ ದಿಲ್ಲಿ ಸರಕಾರ ಹಾಗೂ ಗೃಹ ಸಚಿವಾಲಯದಿಂದ ಅನುಮತಿ ಪಡೆದಿದ್ದಾರೆ. ಇದೀಗ ದಿಲ್ಲಿ ಪೊಲೀಸರು ತಮ್ಮ ಪೂರಕ ಆರೋಪಪಟ್ಟಿಯಲ್ಲಿ ಖಾಲಿದ್ ಹೆಸರನ್ನು ಅಧಿಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ.

ನಿರೀಕ್ಷೆಯಂತೆಯೇ ನೆಟ್ಟಿಗರು ಈ ವರ್ಷದ ಫೆಬ್ರವರಿಯಲ್ಲಿ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಿಲ್ಲಿ ಮುಸ್ಲಿಮರ ಬೆಂಬಲದಿಂದ ಭರ್ಜರಿ ಜಯ ಸಾಧಿಸಿರುವ ಕೇಜ್ರಿವಾಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ ಕೇಜ್ರಿವಾಲ್ ಗೆ ನಾಚಿಕೆಯಾಗಬೇಕು. ನೀವು ಏಕೆ ಬಿಜೆಪಿಯೊಂದಿಗೆ ವಿಲೀನವಾಗಬಾರದು'' ಎಂದು ಓರ್ವ ನೆಟ್ಟಿಗ ಪ್ರಶ್ನಿಸಿದ್ದಾರೆ. "ಶೇಮ್ ಆನ್ ಆಮ್ ಆದ್ಮಿ ಪಾರ್ಟಿ, ಶೇಮ್ ಅನ್ ಯು'' ಎಂದು ಇನ್ನೋರ್ವ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News