ನೋಟು ನಿಷೇಧದ ನಂತರ ಭಾರತದ ಆರ್ಥಿಕತೆ ಬಾಂಗ್ಲಾಕ್ಕಿಂತ ಹಿಂದುಳಿದಿದೆ: ರಾಹುಲ್

Update: 2020-11-08 14:33 GMT

ಹೊಸದಿಲ್ಲಿ, ನ. 7: ನಗದು ಅಮಾನ್ಯೀಕರಣದ ಬಗ್ಗೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾಲ್ಕು ವರ್ಷಗಳ ಹಿಂದಿನ ಪ್ರಧಾನಿ ನರೇಂದ್ರ ಮೋದಿ ಅವರ ನಡೆ ಕ್ರೋನಿ ಬಂಡವಾಳಶಾಹಿ (ಸರಕಾರದೊಂದಿಗೆ ಮೈತ್ರಿ ಹೊಂದಿರುವ ಬಂಡವಾಳಶಾಹಿಗಳು) ಗೆಳೆಯರಿಗೆ ನೆರವು ನೀಡುವ ಹಾಗೂ ಭಾರತೀಯ ಆರ್ಥಿಕತೆಯನ್ನು ನಾಶಮಾಡುವ ಉದ್ದೇಶ ಹೊಂದಿತ್ತು ಎಂದಿದ್ದಾರೆ.

2016ರ ನಗದು ಅಮಾನ್ಯೀಕರಣ ಜನರ ಹಿತಾಸಕ್ತಿಯ ಉದ್ದೇಶ ಹೊಂದಿರಲಿಲ್ಲ. ಅದು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಿತ್ತು ಆದರೆ, ಈ ಆರೋಪವನ್ನು ಕೇಂದ್ರ ಸರಕಾರ ಮತ್ತೆ ಮತ್ತೆ ನಿರಾಕರಿಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಪಕ್ಷದ ಆನ್‌ಲೈನ್ ಅಭಿಯಾನ ‘ಸ್ಪೀಕ್ ಅಪ್ ಎಗೈನ್ಸ್‌ಟ್ ಡಿಮೊ ಡಯಾಸ್ಟರ್’ನ ಭಾಗವಾಗಿ ಬಿಡುಗಡೆ ಮಾಡಲಾದ ವೀಡಿಯೋದಲ್ಲಿ ರಾಹುಲ್ ಗಾಂಧಿ, ಜಗತ್ತಿನ ಆರ್ಥಿಕ ಸದೃಢ ದೇಶಗಳಲ್ಲಿ ಭಾರತ ಒಂದಾಗಿತ್ತು. ಆದರೆ, ಈಗ ಆರ್ಥಿಕತೆಯಲ್ಲಿ ಭಾರತ ಬಾಂಗ್ಲಾದೇಶಕ್ಕಿಂತ ಹಿಂದುಳಿದಿದೆ ಎಂದರು. ಆರ್ಥಿಕ ಕುಸಿತಕ್ಕೆ ಕೊರೋನ ಸಾಂಕ್ರಾಮಿಕ ರೋಗ ಕಾರಣ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಹಾಗಾದರೆ, ಬಾಂಗ್ಲಾದೇಶ ಹಾಗೂ ಜಗತ್ತಿನ ಇತರ ಭಾಗಗಳಲ್ಲಿ ಕೊರೋನ ಸಾಂಕ್ರಾಮಿಕ ರೋಗ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಆರ್ಥಿಕ ಕುಸಿತಕ್ಕೆ ನಿಜವಾದ ಕಾರಣ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ಎಂದು ಅವರು ಹೇಳಿದರು. ‘‘ನಾಲ್ಕು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಗೆ ಆಘಾತ ನೀಡಿದರು. ಅವರು ರೈತರು, ಕಾರ್ಮಿಕರು ಹಾಗೂ ಸಣ್ಣ ಅಂಗಡಿ ಮಾಲಕರಿಗೆ ತೊಂದರೆ ಉಂಟು ಮಾಡಿದರು. ಆಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಆರ್ಥಿಕತೆ ಶೇ. 2 ಇಳಿಕೆಯಾಗುತ್ತದೆ ಎಂದು ಹೇಳಿದ್ದರು. ಅದನ್ನು ನಾವು ಈಗ ನೋಡುತ್ತಿದ್ದೇವೆ’’ ಎಂದು ಅವರು ತಿಳಿಸಿದರು.

ನಗದು ಅಮಾನ್ಯೀಕರಣ ಮಾಡಿರುವುದು ಕಪ್ಪು ಹಣದ ವಿರುದ್ಧ ಹೋರಾಡಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ್ದರು. ಆದರೆ, ಅದು ಸುಳ್ಳು. ಪ್ರಧಾನಿ ಮೋದಿ ಅವರು ನಿಮ್ಮ ಹಣವನ್ನು ತೆಗೆದು 2-3 ಕ್ರೋನಿ ಬಂಡವಾಳಶಾಹಿ ಗೆಳೆಯರಿಗೆ ನೀಡಲು ಬಯಸಿದ್ದರು. ನೀವು ಬ್ಯಾಂಕ್‌ನಲ್ಲಿ ಹಣ ಇರಿಸಿದಿರಿ. ಪ್ರಧಾನಿ ಮೋದಿ ಅವರು ಅದನ್ನು ತಮ್ಮ ಕ್ರೋನಿ ಬಂಡವಾಳಶಾಹಿ ಗೆಳೆಯರಿಗೆ ನೀಡಿದರು ಹಾಗೂ ಅವರ 3,50,000 ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News