ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದ ವಿರಾಟ್‌ ಕೊಹ್ಲಿ: ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

Update: 2020-11-15 12:38 GMT

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಆಸೀಸ್‌ ವಿರುದ್ಧದ ದ್ವಿಪಕ್ಷೀಯ ಸರಣಿ ಆಡಲು ಈಗಾಗಲೇ  ಆಸ್ಟ್ರೇಲಿಯಾ ತಲುಪಿದ್ದು, ಕ್ವಾರಂಟೈನ್‌ ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಆಸ್ಟ್ರೇಲಿಯಲ್ಲಿದ್ದುಕೊಂಡೇ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭ ಕೋರಿದ್ದಾರೆ. 

ತಮ್ಮ ಇನ್ಸ್ಟಾಗ್ರಮ್ ಹಾಗೂ ಟ್ವಿಟರ್ ನಲ್ಲಿ ವಿಶೇಷ ಸಂದೇಶ ರವಾನಿಸಿರುವ ಅವರು, ದೀಪಾವಳಿಯ ಶುಭ ಹಾರೈಸಿದ್ದಲ್ಲದೇ, ಪಟಾಕಿ ಸಿಡಿಸಿ ಪರಿಸರ ಹಾಳು ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.

"ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ದೇವರು ಎಲ್ಲರಿಗೂ ಶಾಂತಿ, ಸಂತೋಷ ಮತ್ತು ಸಮೃದ್ಧಿ ಕರುಣಿಸಲಿ. ನೆನಪಿರಲಿ ಪಟಾಕಿ ಸಿಡಿಸಬೇಡಿ. ಪರಿಸರವನ್ನು ಕಾಪಾಡಿ. ಮನೆಯಲ್ಲಿ ಸರಳವಾಗಿ ದೀಪ ಬೆಳಗಿಸುವ ಮೂಲಕ ಹಬ್ಬ ಆಚರಿಸಿ, ಸಿಹಿ ತಿನಿಸು ಹಂಚಿಕೊಳ್ಳಿ, ದೇವರು ಒಳ್ಳೆಯದು ಮಾಡಲಿ'' ಎಂದು ವಿಡಿಯೋ ಸಂದೇಶದಲ್ಲಿ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಆದರೆ, ಪಟಾಕಿ ಸಿಡಿಸಬೇಡಿ ಎಂದಿರುವ ವಿರಾಟ್‌ ಕೊಹ್ಲಿ ಮನವಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿಯ ಪಾರ್ಟಿಯ ವಿಡಿಯೋವನ್ನು ಹಂಚಿ, ಹುಟ್ಟುಹಬ್ಬದ ದಿನದಂದು ಪಟಾಕಿ ಸಿಡಿಸಿದರೆ ವಾಯು ಮಾಲಿನ್ಯ ಆಗುವುದಿಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ವಿರಾಟ್ ಕೊಹ್ಲಿ, ನೀವು ಬೋಧಿಸುವದನ್ನು ಅನುಸರಿಸಿ. ಹೊಸ ವರ್ಷದ ಆಚರಣೆ ವೇಳೆ ಪಟಾಕಿ ಸಿಡಿಸುವುದನ್ನು, ಕ್ರಿಸ್ಮಸ್ ವೇಳೆ ಕ್ಯಾಂಡಲ್ ಹೊತ್ತಿಸುವುದನ್ನು, ಈದ್, ಐಪಿಎಲ್ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಕಂಡಾಗ ನೀವು ಮಾತನಾಡುವುದನ್ನು ನಾನು ನೋಡಿಲ್ಲ. ಕೇವಲ ದೀಪಾವಳಿಯನ್ನು ಆಯ್ಕೆ ಮಾಡಬೇಡಿ ಎಂದು ವಿನೀತ್ ಗೊಯೆಂಕಾ ಎಂಬವರು ಟ್ವೀಟ್ ಮಾಡಿದ್ದಾರೆ.

ದೀಪಾವಳಿಯಂದು ಪಟಾಕಿ ಸಿಡಿಸಬೇಡಿ, ಆದರೆ ನಿಮ್ಮ ಜನ್ಮದಿನದಂದು ಸಿಡಿಸಬಹುದು. ಯಾಕೆ ಈ ಬೂಟಾಟಿಕೆ ? ಎಂದು ಸಾಗರ್ ಎಂಬವರು ಪ್ರಶ್ನಿಸಿದ್ದಾರೆ.

ವಿರಾಟ್, 10 ದಿನಗಳ ಹಿಂದೆ ನೀವು ನಿಮ್ಮ ಹುಟ್ಟುಹಬ್ಬವನ್ನು ಪಟಾಕಿಗಳಿಂದ ಆಚರಿಸಿದ್ದೀರಿ. ಅವು ಗಾಳಿಯನ್ನು ಕಲುಷಿತಗೊಳಿಸಲಿಲ್ಲವೇ? ನೀವು ಕ್ರಿಕೆಟಿಗ, ಅದರಂತೆಯೇ ಇರಿ. ಹಿಂದೂ ಹಬ್ಬಗಳಲ್ಲಿ ನಿಮ್ಮ ನಿಮ್ಮ ಬಾಯಿ ತೂರಿಸಬೇಡಿ ಎಂದು ಸರ್ಥಕ್ ಸಿಂಗ್ ಎಂಬವರು ಕಮೆಂಟ್ ಮಾಡಿದ್ದಾರೆ.

''ವಿರಾಟ್, ನಾವು ನಿಜವಾಗಿಯೂ ನಿಮ್ಮನ್ನು ಇಷ್ಟಪಡುತ್ತೇವೆ. ನೀವು ನಮ್ಮ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ ದಯವಿಟ್ಟು ಹೇಳಲು ಧೈರ್ಯವಿಲ್ಲದಿದ್ದರೆ ದಯವಿಟ್ಟು ರಕ್ತರಹಿತ ಈದ್ ಮತ್ತು ಟ್ರೀಲೆಸ್ ಕ್ರಿಸ್ಮಸ್ ಅನ್ನು ಆಚರಿಸಿ. ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಸೆಲೆಬ್ರಿಟಿಗಳು ಹೇಳುವುದರಿಂದ ನಮಗೆ ಬೇಸರವಾಗಿದೆ. ಆದರೂ ದೀಪಾವಳಿ ಶುಭಾಶಯಗಳು'' ಎಂದು ಮತ್ತೊಬ್ಬರು ತಿಳಿಸಿದ್ದಾರೆ.

''ಪಟಾಕಿ ಸಿಡಿಸಬೇಡಿ ? ಐಪಿಎಲ್ ಫೈನಲ್ ಸಮಯದಲ್ಲಿ ನೀವು ಪಟಾಕಿ ನೋಡಿಲ್ಲವೇ ? ಕ್ರಿಸ್ಮಸ್ ಅಥವಾ ಹೊಸ ವರ್ಷದಲ್ಲಿ ಪಟಾಕಿ ಸಿಡಿಸುವುದನ್ನು ನೋಡಿಲ್ಲವೇ ? ಆ ಸಮಯದಲ್ಲಿ ನೀವು ಮೌನವಾಗಿರುತ್ತೀರಿ, ಆದರೆ ಹಿಂದೂ ಹಬ್ಬಗಳಲ್ಲಿ ನಿಮ್ಮ ಆಯ್ದ ಜ್ಞಾನವನ್ನು ನೀಡುತ್ತೀರಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

#IStandWithKohli ಎಂದ ಅಭಿಮಾನಿಗಳು

ಒಂದೆಡೆ ಕೊಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಟೀಕೆಗಳು ಬರುತ್ತಿದ್ದರೆ ಮತ್ತೊಂದೆಡೆ ವಿರಾಟ್‌ ಮಾತಿಗೆ ಬಲವಾಗಿ ನಿಂತ ಅಭಿಮಾನಿಗಳು #IStandWithKohli ಎಂದು ಟ್ವೀಟ್ ಮಾಡುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. 

''ದ್ವೇಷಿಸುವವರು ದ್ವೇಷಿಸುತ್ತಾರೆ, ನಕಾರಾತ್ಮಕತೆಯನ್ನು ನಿರ್ಲಕ್ಷಿಸಿ'', ''ಟ್ರೋಲಿಂಗ್ ವಿಷಯಕ್ಕೆ ಬಂದರೆ ಭಾರತೀಯರು ಅತ್ಯಂತ ಕೆಟ್ಟವರು. ಲೆಜೆಂಡ್ ಗಳನ್ನು ಹೇಗೆ ಗೌರವಿಸಬೇಕು ಎಂದು ಅವರಿಗೆ ತಿಳಿದಿಲ್ಲ, ಶೇಮ್ ಆನ್ ಇಂಡಿಯಾ! #istandwithkohli'', ಎಂದು ಹಲವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News