ಯುವತಿಗೆ ಕಿರುಕುಳ ನೀಡಿ ಬೆಂಕಿ ಹಚ್ಚಿದರು: ವಿಡಿಯೋದಲ್ಲಿ ಹೆಸರು ಹೇಳಿದ್ದರೂ ದುಷ್ಕರ್ಮಿಗಳ ಬಂಧನವಿಲ್ಲ!

Update: 2020-11-16 18:23 GMT

#‘ಲವ್ ಜಿಹಾದ್’ ಎಂದು ಬೊಬ್ಬಿಡುವವರ ಪತ್ತೆಯೇ ಇಲ್ಲ!

ಹೊಸದಿಲ್ಲಿ: “ನಾಲ್ಕು ತಿಂಗಳಲ್ಲಿ ಆಕೆಯ ವಿವಾಹ ನಡೆಯುವುದಿತ್ತು. ಆದರೆ ಸತೀಶ್ ಕುಮಾರ್ ರೈ ಮತ್ತು ಚಂದನ್ ಕುಮಾರ್ ರೈ ಎನ್ನುವವರು ನನ್ನ ಪುತ್ರಿಗೆ ಬೆಂಕಿ ಹಚ್ಚಿದರು. ಕೊನೆಯುಸಿರೆಳೆಯುವುದಕ್ಕೂ ಮೊದಲು ಆಕೆ ಅವರ ಹೆಸರುಗಳನ್ನು ಹೇಳಿದ್ದಾಳೆ. ಆದರೆ ನಮಗಾಗಿ ಧ್ವನಿಯೆತ್ತುವವರು ಯಾರೂ ಇಲ್ಲ” ಎಂದು ಹೇಳುವಾಗ ಮೃತ ಯುವತಿ ಗುಲ್ನಾಝ್ ರ ತಾಯಿ ಕಣ್ಣೀರಿಡುತ್ತಾರೆ.

ಇಬ್ಬರು ದುಷ್ಕರ್ಮಿಗಳಾದ ಸತೀಶ್ ಕುಮಾರ್ ರೈ ಮತ್ತು ಚಂದನ್ ಕುಮಾರ್ ರೈ ನಿರಂತರ ಕಿರುಕುಳ ನೀಡುತ್ತಿದ್ದು, ಗುಲ್ನಾಝ್ ರನ್ನು ನ್ನು ಹಿಂಬಾಲಿಸುತ್ತಿದ್ದರು. 2 ವಾರಗಳ ಹಿಂದೆ ಆಕೆಯ ಮೇಲೆ ಸೀಮೆಎಣ್ಣೆ ಸುರಿದಿದ್ದ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗುಲ್ನಾಝ್ ಖಾತೂನ್ 2 ವಾರಗಳ ನಂತರ ಮೃತಪಟ್ಟಿದ್ದಾಳೆ.

“ಅವಳಿಗೆ ಮೂರು ತಿಂಗಳುಗಳಿಂದ ಕಿರುಕುಳ ನೀಡುತ್ತಿದ್ದರು ಮತ್ತು ಅವಳನ್ನು ಹಿಂಬಾಲಿಸುತ್ತಿದ್ದರು” ಎಂದು ತಾಯಿ ಗುಲ್ಶಾನ್ ಪರ್ವೇಝ್ ಹೇಳಿದರೆ, ಸಂತ್ರಸ್ತೆಯ ಕಿರಿಯ ಸಹೋದರಿ ಆರೋಪಿಗಳ ಹೆಸರುಗಳನ್ನು ಹೇಳುತ್ತಾಳೆ.

“ನನ್ನ ಸಹೋದರಿ ಕಸ ಎಸೆಯಲು ಹೋದಾಗ ಆಕೆಗೆ ಅವರು ಕಿರುಕುಳ ನೀಡುತ್ತಿದ್ದರು. ಅಕ್ಟೋಬರ್ 30ರಂದು ಸಂಜೆ 5 ಗಂಟೆಗೆ ಚಂದನ್ ಕುಮಾರ್ ಮತ್ತು ಸತೀಶ್ ಕುಮಾರ್ ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು” ಎಂದು ಹೇಳುತ್ತಾಳೆ.

ತನ್ನ ತಾಯಿಯ ಮನೆಗೆಲಸದಲ್ಲಿ ನೆರವಾಗುತ್ತಿದ್ದ ಗುಲ್ನಾಝ್ ಗೆ ಕೆಲವೇ ತಿಂಗಳುಗಳಲ್ಲಿ ವಿವಾಹ ನಡೆಯುವುದಿತ್ತು. ಸ್ವತಃ ಸಂತ್ರಸ್ತೆ ಮತ್ತು ಆಕೆಯ ಕುಟುಂಬಸ್ಥರು ಆರೋಪಿಗಳ ಹೆಸರು ಹೇಳಿದ್ದರೂ ಕೂಡ ಯಾರನ್ನೂ ಇದುವರೆಗೂ ಬಂಧಿಸಿಲ್ಲ. ಜಸ್ಟಿಸ್ ಫಾರ್ ಗುಲ್ನಾಝ್ ಎನ್ನುವ ಹ್ಯಾಶ್ ಟ್ಯಾಗ್ ಟ್ರೆಂಡ್ ಆದರೂ, ಗುಲ್ನಾಝ್ ರ ತಾಯಿ ಪುತ್ರಿಯ ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟನೆ ನಡೆಸಿದರೂ ಬಿಹಾರದ ನೂತನ ಸಿಎಂ ನಿತೀಶ್ ಕುಮಾರ್ ರಿಂದ ಯಾವ ಹೇಳಿಕೆಯೂ ಹೊರಬಿದ್ದಿಲ್ಲ.

ಕೊನೆಯುಸಿರೆಳೆಯುವುದಕ್ಕೂ ಮೊದಲು ಗುಲ್ನಾಝ್ ಆರೋಪಿಗಳ ಹೆಸರು ಹೇಳಿರುವ ವಿಡಿಯೋ ಕೂಡ ಇದೆ. ಕಣ್ಣೀರಿಡುತ್ತಿರುವ ಪೋಷಕರು ಬೀದಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ಮನಕಲಕುವಂತಿವೆ. ಆದರೆ ಪೊಲೀಸರು ಮತ್ತು ಆಡಳಿತ ಕೈಕಟ್ಟಿ ಕುಳಿತಿದೆ. ಜೊತೆಗೆ ‘ಲವ್ ಜಿಹಾದ್’ ಎಂದು ಬೊಬ್ಬಿಡುವವರು, ದ್ವೇಷ ಹರಡುವವರು ನಾಪತ್ತೆಯಾಗಿದ್ದಾರೆ.

ಬಿಹಾರದ ವೈಶಾಲಿ ಜಿಲ್ಲೆಯ ದೆಸಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯೊಂದು ತಿಳಿಸಿದೆ. ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದ ನಂತರ ತಕ್ಷಣವೇ ಗುಲ್ನಾಝ್ ಳನ್ನು ಪಿಎಂಸಿಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾರೆ.;

ಆಡಳಿತದಿಂದ ಯಾವುದೇ ಭರವಸೆ ಲಭಿಸದಿದ್ದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಗುಲ್ನಾಝ್ ಕುಟುಂಬದೊಂದಿಗೆ ನಿಂತಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ದುಷ್ಕರ್ಮಿಗಳು ಹೆಸರು ಹೇಳಿದ್ದರೂ ಅವರನ್ನು ಬಂಧಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಕ್ಕ ಸಿಕ್ಕ ಅಪರಾಧ ಕೃತ್ಯಗಳಿಗೆಲ್ಲಾ ‘ಲವ್ ಜಿಹಾದ್’ ಎನ್ನುವ ಬಣ್ಣ ಬಳಿಯುವರು ಈ ಘಟನೆಯ ಬಗ್ಗೆ ಏನೂ ಮಾತನಾಡುತ್ತಿಲ್ಲ. ಹತ್ರಸ್ ಘಟನೆಯಂತೆಯೇ ಇಲ್ಲೂ ಕೂಡ ಪೊಲೀಸರ ಶಾಮೀಲಾತಿಯ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಪೊಲೀಸರು ಆಸ್ಪತ್ರೆಗೆ ಹೋಗಿ ಸಂತ್ರಸ್ತೆಯ ಹೇಳಿಕೆ ಪಡೆದಿದ್ದರೂ ಎಫ್ ಐಆರ್ ದಾಖಲಿಸಿರಲಿಲ್ಲ. ನಾಲ್ಕು ದಿನಗಳ ನಂತರ ಯುವತಿಯ ಹೇಳಿಕೆಯ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಫ್ ಐಆರ್ ದಾಖಲಿಸಿದರು. ಈಗಾಗಲೇ ಯುವತಿ ಮೃತಪಟ್ಟಿದ್ದಾಳೆ. ಘಟನೆ ನಡೆದು 15 ದಿನಗಳು ಕಳೆದಿವೆ. ಆದರೆ ಇದುವರೆಗೂ ಪೊಲೀಸರು ಯಾರನ್ನೂ ಬಂಧಿಸಿಲ್ಲ.

ಕೃಪೆ: sabrangindia.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News