ಲಂಚದ ಅಪಾಯ ಹೆಚ್ಚಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತೇ?
ಹೊಸದಿಲ್ಲಿ, ನ.19: ವಾಣಿಜ್ಯ ಉದ್ದೇಶದ ಲಂಚದ ಅಪಾಯ ಹೆಚ್ಚಿರುವ ದೇಶಗಳ ಜಾಗತಿಕ ಪಟ್ಟಿಯಲ್ಲಿ (2020ರ ಸಾಲಿಗೆ) ಭಾರತ 77ನೇ ಸ್ಥಾನದಲ್ಲಿದೆ ಎಂದು ಲಂಚ ನಿಗ್ರಹ ಪ್ರಮಾಣ ಸಂಯೋಜನಾ ಸಂಸ್ಥೆ ‘ಟ್ರೇಸ್’ನ ವರದಿ ತಿಳಿಸಿದೆ.
194 ದೇಶಗಳಲ್ಲಿ ಲಂಚದ ಅಪಾಯವನ್ನು ಪರಿಶೀಲಿಸಿ ತಯಾರಿಸುವ ವರದಿಯಲ್ಲಿ ಭಾರತ 45 ಅಂಕಗಳೊಂದಿಗೆ 77ನೇ ಸ್ಥಾನದಲ್ಲಿದ್ದರೆ ಉತ್ತರಕೊರಿಯಾ, ತುರ್ಕ್‌ಮೆನಿಸ್ತಾನ್, ದಕ್ಷಿಣ ಸುಡಾನ್, ವೆನೆಝುವೆಲ ದೇಶಗಳಲ್ಲಿ ವಾಣಿಜ್ಯ ಲಂಚದ ಅಪಾಯ ಹೆಚ್ಚಿದೆ. ಡೆನ್ಮಾರ್ಕ್, ನಾರ್ವೆ, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ನ್ಯೂಝಿಲ್ಯಾಂಡ್‌ನಲ್ಲಿ ಅತ್ಯಂತ ಕಡಿಮೆಯಿದೆ ಎಂದು ತಿಳಿಸಲಾಗಿದೆ. 2019ರಲ್ಲಿ ಭಾರತ 78ನೇ ಸ್ಥಾನದಲ್ಲಿತ್ತು. ಸರಕಾರದೊಂದಿಗೆ ವ್ಯಾಪಾರ ಸಂಬಂಧ, ಲಂಚ ನಿಗ್ರಹ ಕ್ರಮಗಳು, ಸರಕಾರಿ ಸೇವೆ ಮತ್ತು ನಾಗರಿಕ ಸೇವೆಯಲ್ಲಿನ ಪಾರದರ್ಶಕತೆ ಮತ್ತು ನಾಗರಿಕ ಸಮಾಜದ ಮೇಲ್ವಿಚಾರಣೆ ಸಾಮರ್ಥ್ಯ- ಈ ನಾಲ್ಕು ಮಾನದಂಡದ ಆಧಾರದಲ್ಲಿ ಈ ವರದಿ ತಯಾರಿಸಲಾಗಿದೆ. ಪಾಕಿಸ್ತಾನ, ಚೀನಾ, ನೇಪಾಳ ಮತ್ತು ಬಾಂಗ್ಲಾಕ್ಕಿಂತ ಭಾರತದ ಸ್ಥಿತಿ ಉತ್ತಮವಾಗಿದೆ. ಭೂತಾನ್ 48ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ.