ಪಿಒಕೆಯ ಉಗ್ರರ ಶಿಬಿರದ ಮೇಲೆ 'ಪಿನ್‌ಪಾಯಿಂಟ್ ಸ್ಟ್ರೈಕ್' ನಡೆದಿದೆ ಎಂಬ ವರದಿ ನಿರಾಕರಿಸಿದ ಭಾರತೀಯ ಸೇನೆ
ಹೊಸದಿಲ್ಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ 'ಪಿನ್‌ಪಾಯಿಂಟ್ ಸ್ಟ್ರೈಕ್'(ನಿಖರ ದಾಳಿ) ನಡೆದಿದೆ ಎಂಬ ವರದಿಯನ್ನು ಭಾರತೀಯ ಸೇನೆಯು ಗುರುವಾರ ನಿರಾಕರಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ನಿಯಂತ್ರಣ ರೇಖೆಯಾದ್ಯಂತ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ(ಪಿಒಕೆ)ಭಾರತೀಯ ಸೇನೆ ದಾಳಿ ನಡೆಸಿದೆ ಎಂಬ ವರದಿಗಳು ನಕಲಿ ಎಂದು ಲೆಫ್ಟಿನೆಂಟ್ ಜನರಲ್ ಪರಮ್‌ಜೀತ್ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ತಿಳಿಸಿದೆ.
ನಿಯಂತ್ರಣ ರೇಖೆಯ ಉದ್ದಕ್ಕೂ ಗುರುವಾರ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದು ಸೇನೆಯು ಸ್ಪಷ್ಪಪಡಿಸಿದೆ ಎಂದು 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ. ಪಾಕಿಸ್ತಾನವು ಭಾರತದೊಳಗೆ ಉಗ್ರರನ್ನು ನುಸುಳಿಸಲು ಪ್ರಯತ್ನಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ 'ಪಿನ್‌ಪಾಯಿಂಟ್ ಸ್ಟ್ರೈಕ್'ನ್ನು ನಡೆಸಿದೆ ಎಂದು ಪಿಟಿಐ ವರದಿ ಮಾಡಿದ ಬಳಿಕ ಈ ಸ್ಪಷ್ಟೀಕರಣ ನೀಡಲಾಗಿದೆ.
ನಾಗ್ರೊಟಾ ಬಳಿಯ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ನಾಲ್ವರು ಶಂಕಿತ ಉಗ್ರರನ್ನು ಕೊಂದಿದ್ದಾರೆ ಎಂದು ಗುರುವಾರ ವರದಿಯಾಗಿತ್ತು.
"ಶಂಕಿತ ಉಗ್ರರು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಅಪಾರ ಪ್ರಮಾಣದಲ್ಲಿ ಸಾಗಿಸುತ್ತಿದ್ದಾರೆ. ಮುಂಬರುವ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆ ಹಾಗೂ ಪಂಜಾಯತ್ ಉಪ ಚುನಾವಣೆಯನ್ನು ಅಡ್ಡಿಪಡಿಸಲು ಉಗ್ರರು ಕಾಶ್ಮೀರಕ್ಕೆ ನುಸುಳಿ ಬರುತ್ತಿದ್ದಾರೆ'' ಎಂದು ಜಮ್ಮು-ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.