×
Ad

ಕೊರೋನ ಪರೀಕ್ಷೆಯ ನಕಲಿ ವರದಿ ನೀಡುತ್ತಿದ್ದ ಪ್ರಯೋಗಾಲಯದ ಮೇಲೆ ದಾಳಿ; ಇಬ್ಬರ ಬಂಧನ

Update: 2020-11-22 23:48 IST

ರಾಮಗಡ (ಜಾರ್ಖಂಡ್), ನ. 22: ಗುರುಗ್ರಾಮದ ಸೆಕ್ಟರ್ 30ರ ಸೈನಿಖೇರ ಗ್ರಾಮದಲ್ಲಿ ಕೊರೋನ ಪರೀಕ್ಷೆಯ ನಕಲಿ ವರದಿ ನೀಡುತ್ತಿದ್ದ ನಕಲಿ ಪ್ಯಾಥೋಲಜಿ ಪ್ರಯೋಗಾಲಯದ ಮೇಲೆ ಶನಿವಾರ ದಾಳಿ ನಡೆಸಿರುವ ಹರ್ಯಾಣ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕೋಲ್ಕತ್ತಾದ ಅನಿರ್ಬನ್ ರಾಯ್ ಹಾಗೂ ಮುರ್ಷಿದಾಬಾದ್‌ನ ಪರಿಮಳ್ ರಾಯ್ ಎಂದು ಗುರುತಿಸಲಾಗಿದೆ. ಇಬ್ಬರೂ ಸೈನಿಖೇರ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವಿದೇಶಕ್ಕೆ ತೆರಳುವವರಿಗೆ ಗುರುಗಾಂವ್‌ನಲ್ಲಿ ಕೊರೋನ ಪರೀಕ್ಷೆಯ ನಕಲಿ ವರದಿಗಳನ್ನು ನೀಡಲಾಗುತ್ತಿದೆ ಎಂಬ ದೂರನ್ನು ಮುಖ್ಯಮಂತ್ರಿ ಅವರ ಫ್ಲಯಿಂಗ್ ಸ್ಕ್ವಾಡ್ ಸ್ವೀಕರಿಸಿತ್ತು ಎಂದು ಔಷಧ ನಿಯಂತ್ರಣ ಅಧಿಕಾರಿ ಅಮನ್‌ದೀಪ್ ಚೌಹಾನ್ ತಿಳಿಸಿದ್ದಾರೆ.

ನಿರ್ದಿಷ್ಟ ಮಾಹಿತಿ ಹಿನ್ನೆಲೆಯಲ್ಲಿ ಮೆಡಿಕಾರ್ಟ್‌ಜ್ ಪಾಥೋಲಜಿ ಲ್ಯಾಬ್ ಆ್ಯಂಡ್ ಮೆಡಿಕಲ್ ಟೂರಿಸಂಗೆ ನಕಲಿ ಗ್ರಾಹಕನನ್ನು ಕಳುಹಿಸಿದೆವು. ಅವರು ಕೊರೋನ ಪರೀಕ್ಷೆಯ ಪಾಸಿಟಿವ್ ವರದಿ ಕೇಳಿದರು. ಪ್ರಯೋಗಾಲಯದ ಸಿಬ್ಬಂದಿ ನೀಡಿದರು. ಈ ಪ್ರಯೋಗಾಲಯ ಡಿವೈಎನ್‌ಇಎಕ್ಸ್ ಡಯಾಗ್ನಸ್ಟಿಕ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂಬುದು ನಮಗೆ ತಿಳಿಯಿತು. ಅನಂತರ ಮುಖ್ಯಮಂತ್ರಿ ಅವರ ಫ್ಲೈಯಿಂಗ್ ಸ್ಕ್ವಾಡ್ ಶನಿವಾರ ರಾತ್ರಿ ಈ ಪ್ರಯೋಗಾಲಯದ ಮೇಲೆ ದಾಳಿ ನಡೆಸಿತು ಹಾಗೂ ಇಬ್ಬರನ್ನು ಬಂಧಿಸಿತು ಎಂದು ಚೌಹಾನ್ ಹೇಳಿದರು. ಈ ಪ್ರಯೋಗಾಲಯ ಕಳೆದ ಎರಡು ತಿಂಗಳಿಂದ ಈ ನಕಲಿ ವರದಿಗಳನ್ನು ನೀಡುತ್ತಿದೆ. ಪರೀಕ್ಷೆಯ ಪ್ರತಿ ವರದಿಗೆ 1,400ರಿಂದ 3,000ದ ವರಗೆ ಶುಲ್ಕ ವಿಧಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕಕ್ಕೆ ತೆರಳುವ ಕೆಲವರು ಈ ಪ್ರಯೋಗಾಲಯದಿಂದ ಕೊರೋನ ನೆಗೆಟಿವ್ ವರದಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಕೆಲವರು ರಜೆ ಪಡೆಯಲು ಪಾಸಿಟಿವ್ ವರದಿ ಪಡೆದುಕೊಳ್ಳುತ್ತಿದ್ದಾರೆ ಎಂದು ಚೌಹಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News