2014-2029ರ ಅವಧಿ ಭಾರತಕ್ಕೆ ತುಂಬಾ ಮುಖ್ಯ: ಪ್ರಧಾನಿ ಮೋದಿ

Update: 2020-11-23 14:16 GMT

ಹೊಸದಿಲ್ಲಿ,ನ.23: ಭಾರತದಂತಹ ಯುವ ಪ್ರಜಾಪ್ರಭುತ್ವಕ್ಕೆ 16 ಮತ್ತು 18ನೇ ಲೋಕಸಭೆಗಳ ನಡುವಿನ 2014-2029ರ ಅವಧಿಯು ಅತ್ಯಂತ ಮುಖ್ಯವಾಗಿದೆ ಎಂದು ಸೋಮವಾರ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು,ಕಳೆದ ಆರು ವರ್ಷಗಳು ದೇಶದ ಅಭಿವೃದ್ಧಿಗೆ ಐತಿಹಾಸಿಕವಾಗಿದ್ದವು ಮತ್ತು ಉಳಿದಿರುವ ಅವಧಿಯಲ್ಲಿ ಇನ್ನೂ ಬಹಳಷ್ಟು ಸಾಧನೆಗಳನ್ನು ಮಾಡಬೇಕಿದೆ ಎಂದು ಹೇಳಿದರು.

 ದಿಲ್ಲಿಯಲ್ಲಿ ಸಂಸದರಿಗಾಗಿ ನಿರ್ಮಿಸಲಾಗಿರುವ 76 ಮಹಡಿಗಳ ಬಹು ಫ್ಯ್ಲಾಟ್‌ಗಳ ಸಮುಚ್ಚಯವನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು,16,17 ಮತ್ತು 18ನೇ ವರ್ಷಗಳು ಯುವಜನರ ಪಾಲಿಗೆ ಬಹುಮುಖ್ಯವಾಗಿರು ವಂತೆ 16 ಮತ್ತು 18ನೇ ಲೋಕಸಭೆಗಳ ನಡುವಿನ ಅವಧಿಯು ಭಾರತದಂತಹ ಯುವರಾಷ್ಟ್ರಕ್ಕೆ ಬಹುಮುಖ್ಯವಾಗಿದೆ ಎಂದು ನುಡಿದರು.

16ನೇ ಲೋಕಸಭೆ (2014-2019)ಯು ದೇಶದ ಪ್ರಗತಿಗೆ ಐತಿಹಾಸಿಕವಾಗಿತ್ತು ಎಂದು ಹೇಳಿದ ಮೋದಿ,ಕೃಷಿ ಮತ್ತು ಕಾರ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆಗಾಗಿ ಮಸೂದೆಗಳ ಅಂಗೀಕಾರದ ಜೊತೆ ವಿಧಿ 370ರ ರದ್ದತಿ ಮತ್ತು ಪೌರತ್ವ ಕಾಯ್ದೆಯನ್ನು ಪ್ರಸ್ತಾಪಿಸಿ,17ನೇ ಲೋಕಸಭೆಯು ತಾನು ತೆಗೆದುಕೊಂಡ ಹಲವಾರು ನಿರ್ಧಾರಗಳಿಂದಾಗಿ ಈಗಾಗಲೇ ಇತಿಹಾಸದ ಭಾಗವಾಗಿದೆ ಎಂದು ಹೇಳಿದರು.

‘ಮುಂದಿನ ಲೋಕಸಭೆ (2024-2029)ಯೂ ಕೂಡ ಈ ನೂತನ ದಶಕದಲ್ಲಿ ದೇಶವನ್ನು ಮುನ್ನಡೆಸುವಲ್ಲಿ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತದೆ ಎಂಬ ವಿಶ್ವಾಸ ನನಗಿದೆ. ದೇಶಕ್ಕಾಗಿ ನಾವು ಸಾಧಿಸಬೇಕಾಗಿರುವುದು ಇನ್ನೂ ಬಹಳಷ್ಟಿದೆ. ಅದು ಆತ್ಮನಿರ್ಭರ ಭಾರತ ಅಭಿಯಾನವಾಗಿರಲಿ,ಆರ್ಥಿಕ ಗುರಿಗಳು ಅಥವಾ ಇಂತಹುದೇ ಇತರ ಹಲವಾರು ಪಣಗಳಿರಲಿ,ಈ ಅವಧಿಯಲ್ಲಿ ನಾವು ಅವುಗಳನ್ನು ಸಾಧಿಸಬೇಕಿದೆ’ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು,ಸಂಸದರನ್ನುದ್ದೇಶಿಸಿ ಹೇಳಿದರು.

 ‘ಇತಿಹಾಸವು ಲೋಕಸಭೆಯ ವಿವಿಧ ಅವಧಿಗಳ ಮೌಲ್ಯಮಾಪನ ಮಾಡುವಾಗ ಈ ಅವಧಿಯು ದೇಶದ ಅಭಿವೃದ್ಧಿಯಲ್ಲಿ ಸುವರ್ಣ ಅಧ್ಯಾಯ ಎಂದು ಸ್ಮರಿಸಲ್ಪಡುವಂತೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ’ಎಂದರು.

ಜಿಎಸ್‌ಟಿ ಜಾರಿ,ದಿವಾಳಿತನ ಕಾಯ್ದೆ ಮತ್ತು ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಲು ಉದ್ದೇಶಿತ ಕಾನೂನು ಇವೆಲ್ಲ ತನ್ನ ಸರಕಾರದ ಮೊದಲ ಅವಧಿ (2014-2019)ಯ ಪ್ರಮುಖ ಸಾಧನೆಗಳಲ್ಲಿ ಸೇರಿವೆ ಎಂದು ಹೇಳಿದರು.

ಭಾರತವು ಈಗ ತನ್ನ 130 ಕೋಟಿ ಪ್ರಜೆಗಳ ಕನಸುಗಳನ್ನು ನನಸಾಗಿಸಲು ಮತ್ತು ಸ್ವಾವಲಂಬನೆಯ ಗುರಿಯನ್ನು ಸಾಧಿಸಲು ಸಂಪನ್ಮೂಲಗಳು ಮತ್ತು ದೃಢಸಂಕಲ್ಪವನ್ನು ಹೊಂದಿದೆ ಎಂದ ಪ್ರಧಾನಿ,ದೇಶದ ನೂತನ ಮನಃಸ್ಥಿತಿ ಮತ್ತು ಮನೋಭಾವ 16 ನೇ ಲೋಕಸಭೆಯಲ್ಲಿ ಪ್ರತಿಫಲಿಸಿತ್ತು,ಅದು 300ಕ್ಕೂ ಅಧಿಕ ಮೊದಲ ಬಾರಿಯ ಸಂಸದರನ್ನು ಒಳಗೊಂಡಿತ್ತು. ಹಾಲಿ ಲೋಕಸಭೆಯಲ್ಲಿ 260 ಸಂಸದರು ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. 400ಕ್ಕೂ ಅಧಿಕ ಸಂಸದರು ಮೊದಲ ಅಥವಾ ಎರಡನೇ ಅವಧಿಗೆ ಆರಿಸಿಬಂದಿದ್ದಾರೆ. ಹಾಲಿ ಲೋಕಸಭೆಯು ದಾಖಲೆ ಸಂಖ್ಯೆಯಲ್ಲಿ ಮಹಿಳಾ ಸಂಸದರನ್ನೂ ಹೊಂದಿದೆ. ಇದೇ ಕಾರಣದಿಂದ ಸಂಸತ್ತು ತ್ವರಿತವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಮತ್ತು ಹೆಚ್ಚು ಚರ್ಚೆಗಳನ್ನು ನಡೆಸುತ್ತಿದೆ. 16ನೇ ಲೋಕಸಭೆಯು ಶೇ.15ರಷ್ಟು ಅಧಿಕ ಮಸೂದೆಗಳನ್ನು ಅಂಗೀಕರಿಸಿದ್ದರೆ, 17ನೇ ಲೋಸಭೆಯ ಮೊದಲ ಅಧಿವೇಶನದ ಉತ್ಪಾದಕತೆಯು ಶೇ.135ರಷ್ಟಿತ್ತು. ರಾಜ್ಯಸಭೆಯೂ ಶೇ.100ರಷ್ಟು ಉತ್ಪಾದಕತೆಯನ್ನು ಸಾಧಿಸಿದೆ. ಇದು ಕಳೆದ ಎರಡು ದಶಕಗಳಲ್ಲಿ ಸಂಸತ್ತಿನ ಅತ್ಯುತ್ತಮ ನಿರ್ವಹಣೆಯಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News