ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ನಿಧನ

Update: 2020-11-25 13:57 GMT

ಹೊಸದಿಲ್ಲಿ, ನ.25: ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಬುಧವಾರ ನಸುಕಿನ ಜಾವ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 71 ವರ್ಷದ ಅಹ್ಮದ್ ಪಟೇಲ್ ಬಹುಅಂಗಾಂಗ ವೈಫಲ್ಯದಿಂದ ನಿಧನರಾಗಿರುವುದಾಗಿ ಅವರ ಪುತ್ರ ಫೈಸಲ್ ಪಟೇಲ್ ಹೇಳಿದ್ದಾರೆ.

ಕೊರೋನ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ಬಳಿಕ ಅವರನ್ನು ನವೆಂಬರ್ 15ರಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಹ್ಮದ್ ಪಟೇಲ್ ನಿಧನದಿಂದ ನಿಷ್ಟಾವಂತ ಒಡನಾಡಿ, ನಂಬಿಕಸ್ಥ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶೋಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದ ಪಟೇಲ್, 1977ರಿಂದ 89ರ ನಡುವೆ 3 ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು. 1993ರಿಂದ ಗುಜರಾತ್‌ನಿಂದ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ರಾಷ್ಟ್ರಪತಿ, ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹಿತ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ. ‘ಅಹ್ಮದ್ ಪಟೇಲ್ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ನಂಬಿಗಸ್ತ ಒಡನಾಡಿ ಮತ್ತು ಸ್ನೇಹಿತನಾಗಿದ್ದ ಪಟೇಲ್ ತಮ್ಮ ಬದುಕನ್ನು ಪಕ್ಷಕ್ಕಾಗಿ ಸಮರ್ಪಿಸಿಕೊಂಡವರು. ಅವರ ಅಗಲಿಕೆಯ ದು:ಖವನ್ನು ಸಹಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸೋನಿಯಾ ಗಾಂಧಿ ಟ್ವೀಟ್ ಮಾಡಿದ್ದಾರೆ. “ಅಹ್ಮದ್ ಪಟೇಲ್ ಕಾಂಗ್ರೆಸ್‌ನ ಆಧಾರಸ್ಥಂಭವಾಗಿದ್ದರು. ಪಕ್ಷವೇ ಅವರಿಗೆ ಬದುಕು ಮತ್ತು ಉಸಿರಾಗಿತ್ತು . ಪಕ್ಷಕ್ಕೆ ಅತ್ಯಂತ ಕಷ್ಟದ ಕಾಲ ಎದುರಾದಾಗಲೂ ಅವರು ಪಕ್ಷಕ್ಕೆ ಹೆಗಲು ಕೊಟ್ಟವರು. ಪಕ್ಷಕ್ಕೊಂದು ಆಸ್ತಿಯಾಗಿದ್ದ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ” ಎಂದು ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖಂಡ ಜೈರಾಂ ರಮೇಶ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್‌ಸಿಪಿ ಮುಖಂಡ ಶರದ್ ಪವಾರ್ ಸಹಿತ ಹಲವು ಗಣ್ಯರು ಅಹ್ಮದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News