ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಕೋವಿಡ್ ಸಕ್ರಿಯ ಪ್ರಕರಣಗಳು

Update: 2020-11-25 03:43 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿದೆ. ಮಂಗಳವಾರ ಒಟ್ಟು ಗುಣಮುಖರಾದವರ ಸಂಖ್ಯೆಗಿಂತ 5500ರಷ್ಟು ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕು ದಿನಗಳಲ್ಲಿ ಮೂರನೇ ಬಾರಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ದೇಶದ ಸಕ್ರಿಯ ಪ್ರಕರಣಗಳಲ್ಲಿ ಅಕ್ಟೋಬರ್ 1ರ ಬಳಿಕ ದಿನವೊಂದರಲ್ಲಿ ದಾಖಲಾಗಿರುವ ಗರಿಷ್ಠ ಹೆಚ್ಚಳ ಇದಾಗಿದೆ. ಇದು ದೇಶದಲ್ಲಿ ಸೋಂಕು ಮತ್ತೆ ಹೆಚ್ಚುತ್ತಿದೆ ಎನ್ನುವುದರ ಸ್ಪಷ್ಟ ಸೂಚಕವಾಗಿದೆ. ಅಕ್ಟೋಬರ್ 1ರ ಬಳಿಕ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಪ್ರವೃತ್ತಿ ಕಂಡುಬಂದಿತ್ತು. ನವೆಂಬರ್ 14ರಂದು ಹಾಗೂ ಕಳೆದ ಶನಿವಾರ ಮತ್ತೆ ಸಕ್ರಿಯ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿತ್ತು.

ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,47,391 ಆಗಿದ್ದು, ಮಂಗಳವಾರ ಹೊಸದಾಗಿ 44,188 ಪ್ರಕರಣಗಳು ದಾಖಲಾಗಿವೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 92,22,665. ಆದರೆ ದೇಶದಲ್ಲಿ ಸತತ ಎರಡನೇ ದಿನ ಸಾವಿನ ಸಂಖ್ಯೆ 500ಕ್ಕಿಂತ ಕಡಿಮೆ ಇದೆ. ಕಳೆದ 24 ಗಂಟೆಗಳಲ್ಲಿ 478 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. 86,40,000 ಮಂದಿ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇಕಡ 97.3ರಷ್ಟು ಆಗಿದೆ.

ದೆಹಲಿಯಲ್ಲಿ 6,224 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, 109 ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News