ಅಹ್ಮದ್ ಪಟೇಲ್ ನಿಧನಕ್ಕೆ ಪ್ರಧಾನಿ ಮೋದಿ, ಗಣ್ಯರ ಸಂತಾಪ

Update: 2020-11-25 03:57 GMT

ಹೊಸದಿಲ್ಲಿ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಅಹ್ಮದ್ ಪಟೇಲ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಅನೇಕ ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

"ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವಲ್ಲಿ ಅವರು ನಿರ್ವಹಿಸಿದ ಪಾತ್ರ ಸದಾ ನೆನಪಿನಲ್ಲಿ ಉಳಿಯುವಂಥದ್ದು" ಎಂದು ಪ್ರಧಾನಿ ಶೋಕಸಂದೇಶದಲ್ಲಿ ಬಣ್ಣಿಸಿದ್ದಾರೆ.

"ಅಹ್ಮದ್‌ ಪಟೇಲ್ ಅವರ ನಿಧನ ತೀವ್ರ ದುಃಖ ತಂದಿದೆ. ಹಲವು ವರ್ಷಗಳ ಸಾರ್ವಜನಿಕ ಜೀವನದಲ್ಲಿ ಅವರು ಅಪಾರ ಸಮಾಜಸೇವೆ ಮಾಡಿದ್ದಾರೆ. ತೀಕ್ಷ್ಣ ಬುದ್ಧಿಗೆ ಹೆಸರಾಗಿದ್ದ ಅವರು ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ವಹಿಸಿದ ಪಾತ್ರ ಸದಾ ಸ್ಮರಣೀಯ. ಅವರ ಪುತ್ರ ಫೈಝಲ್ ಜತೆ ಮಾತನಾಡಿ ಸಂತಾಪ ಸೂಚಿಸಿದ್ದೇನೆ. ಅಹ್ಮದ್ ಭಾಯ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಶೋಕಸಂದೇಶದಲ್ಲಿ ಅಹ್ಮದ್ ಪಾಟೀಲ್ ಅವರನ್ನು ಅಪ್ರತಿಮ ಸಂಸದ ಎಂದು ಬಣ್ಣಿಸಿದ್ದಾರೆ. ಕೌಶಲ ಮತ್ತು ತಂತ್ರಗಾರಿಕೆಗೆ ಹೆಸರಾಗಿದ್ದ ಅವರು, ಸಮೂಹ ನಾಯಕರಾಗಿದ್ದರು. ಅವರ ಸ್ನೇಹಶೀಲ ವ್ಯಕ್ತಿತ್ವದಿಂದಾಗಿ ಅವರು ಎಲ್ಲ ಪಕ್ಷಗಳಲ್ಲೂ ಸ್ನೇಹಿತರನ್ನು ಹೊಂದಿದ್ದರು ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ.

ನಾಲ್ಕು ದಶಕಗಳ ಕಾಲ ಸುಧೀರ್ಘ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದ ಅವರು ಮೂರು ಬಾರಿ ಲೋಕಸಭೆಗೆ ಹಾಗೂ ಐದು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಪಟೇಲ್ ನಿಧನಕ್ಕೆ ವ್ಯಾಪಕ ಸಂತಾಪ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News