ವಿಪಕ್ಷಗಳು ರೈತರನ್ನು ವಂಚಿಸುತ್ತಿವೆ: ಪ್ರಧಾನಿ

Update: 2020-11-30 16:15 GMT

ವಾರಣಾಸಿ, ನ.30: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳ ಕುರಿತು ಸೋಮವಾರ ಇಲ್ಲಿ ಪ್ರತಿಪಕ್ಷಗಳ ವಿರುದ್ಧ ತೀವ್ರ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅವು ರೈತರ ವಿರುದ್ಧ ಕುತಂತ್ರಗಳನ್ನು ನಡೆಸುವ ಮೂಲಕ ಅವರನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.

ದಶಕಗಳ ಕಾಲ ರೈತರನ್ನು ದಾರಿ ತಪ್ಪಿಸಿದ್ದ ಅದೇ ಜನರೇ ಈಗಲೂ ಈ ಐತಿಹಾಸಿಕ ಕೃಷಿ ಸುಧಾರಣೆ ಕಾನೂನುಗಳ ಕುರಿತು ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪ್ರತಿಪಕ್ಷಗಳನ್ನು ಪ್ರಸ್ತಾಪಿಸಿ, ಆದರೆ ಅವುಗಳನ್ನು ನೇರವಾಗಿ ಹೆಸರಿಸದೆ ಮೋದಿ ಹೇಳಿದರು.

ತನ್ನ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು,ಕಾನೂನುಗಳನ್ನು ವಿರೋಧಿಸುತ್ತಿರುವವರು ಆತಂಕ ಮತ್ತು ಪ್ರತಿಭಟನೆಗಳನ್ನು ಉತ್ತೇಜಿಸುತ್ತಿದ್ದಾರೆ. ಅವರು ಸಮಾಜದ ದಾರಿಯನ್ನು ತಪ್ಪಿಸುತ್ತಿದ್ದಾರೆ. ಇದೇ ಜನರು ಈ ಹಿಂದೆ ಕನಿಷ್ಠ ಬೆಂಬಲ ಬೆಲೆ,ಸಾಲ ಮನ್ನಾ ಮತ್ತು ರಸಗೊಬ್ಬರ ಸಬ್ಸಿಡಿಗಳ ಹೆಸರಿನಲ್ಲಿ ರೈತರನ್ನು ಮೋಸಗೊಳಿಸಿದ್ದರು. ರೈತರನ್ನು ಸುದೀರ್ಘ ಕಾಲ ವಂಚಿಸಲಾಗಿದೆ ಎಂದರು.

ರೈತರ ಆದಾಯವನ್ನು ಇಮ್ಮಡಿಗೊಳಿಸಲು ಪ್ರಯತ್ನಗಳು ಈಗ ನಡೆಯುತ್ತಿವೆ ಎಂದ ಅವರು,ರೈತರಿಗಾಗಿ ಸರಕಾರವು ರೂಪಿಸಿರುವ ಯೋಜನೆಗಳನ್ನು ಪಟ್ಟಿ ಮಾಡಿದರು. ಇದಕ್ಕೂ ಮುನ್ನ ವಾರಣಾಸಿ-ಅಲಹಾಬಾದ್ ನಡುವೆ 73 ಕಿ.ಮೀ.ಉದ್ದದ ಷಟ್ಪಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮೋದಿ,ಇಂದು ಉತ್ತರ ಪ್ರದೇಶವು ‘ಎಕ್ಸ್‌ಪ್ರೆಸ್ ಪ್ರದೇಶ ’ಎಂದು ಗುರುತಿಸಿಕೊಳ್ಳುತ್ತಿದೆ. ಈ ಹಿಂದೆ ಪರಿಸ್ಥಿತಿ ಹೇಗಿತ್ತು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಕ್ಸ್‌ಪ್ರೆಸ್‌ವೇ ಯೋಜನೆಗಳನ್ನು ಪ್ರಸ್ತಾಪಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News